ಕಾಬೂಲ್: ಅರ್ಧಕ್ಕಿಂತ ಅಧಿಕ ಅಫ್ಘಾನ್ ಜನತೆ ಮೂಲಭೂತ ಆಹಾರ, ಜೀವನ ನಿರ್ವಹಣೆಯ ಅಗತ್ಯ ಕ್ರಮಗಳನ್ನು ಪೂರೈಸುವಲ್ಲಿ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿರುವ ಕಾರಣ ತಮ್ಮ ಮಕ್ಕಳ ಕಿಡ್ನಿ ಸೇರಿದಂತೆ ಅಂಗಾಂಗಗಳ ಮಾರಾಟಕ್ಕೆ ಕುಟುಂಬ ಬಲವಂತಪಡಿಸುತ್ತಿರುವ ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ.
ಅಫ್ಘಾನಿಸ್ತಾನದಲ್ಲಿ ಅನೇಕ ವರ್ಷಗಳಿಂದ ಜನರು ರೊಟ್ಟಿ ತುಂಡು ಪಡೆಯಲು ಮುಲಾಜಿಲ್ಲದೆ ತಮ್ಮ ಕಿಡ್ನಿಯನ್ನು ಮಾರಾಟ ಮಾಡುತ್ತಿದ್ದಾರೆ.
ಈ ಮಧ್ಯೆ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಅಂತರಾಷ್ಟ್ರೀಯ ನೆರವಿಗೆ ತೀವ್ರ ಅಡಚಣೆ ಮತ್ತು ಕಠಿಣ ಪರಿಸ್ಥಿತಿಯಿಂದಾಗಿ ಕಡು ಬಡತನದಲ್ಲಿರುವ ಲಕ್ಷಾಂತರ ಜನರ ಜೀವನವನ್ನು ಅಪಾಯಕ್ಕೆ ತಳ್ಳುತ್ತಿವೆ ಎಂದು ಪಾಶ್ಚಿಮಾತ್ಯ ಮಾಧ್ಯಮಗಳು ಪ್ರಚಾರ ಪಡಿಸುತ್ತಿವೆ.
ಅನಿವಾರ್ಯವಾಗಿ ಕಿಡ್ನಿ ವ್ಯಾಪಾರದ ಮೊರೆ ಹೋಗುತ್ತಿರುವ ಅಫ್ಘಾನ್ ಜನತೆ
ಸ್ಥಳೀಯ ನಿವಾಸಿಯಾದ ಅಬ್ದುಲ್ ಖಾದಿರ್ ಎಂಬವರು ಬಡತನದಿಂದಾಗಿ ಚಹಾ ಮತ್ತು ಒಣ ರೊಟ್ಟಿಯನ್ನು ಸೇವಿಸಿ ಜೀವನ ನಿರ್ವಹಿಸುತ್ತಿದ್ದರು. ಆಸ್ಪತ್ರೆಗೆ ತೆರಳಲ್ಲು ತನ್ನಲ್ಲಿ ಹಣವಿಲ್ಲ. ಇದರಿಂದಾಗಿ ನನ್ನ ಕಿಡ್ನಿಯನ್ನು 1.5 ಲಕ್ಷಕ್ಕೆ ಮಾರಾಟ ಮಾಡಲು ಆಸ್ಪತ್ರೆಗೆ ತೆರಳಿದೆ. ಶಸ್ತ್ರಚಿಕಿತ್ಸೆ ಮಾಡಿ ಕಿಡ್ನಿ ತೆಗೆದರೆ ನಾವು ಬದುಕುವುದಿಲ್ಲ ಎಂದು ವೈದ್ಯರು ತಿಳಿಸಿರುತ್ತಾರೆ. ಆದರೂ ಕುಟುಂಬ ನಿರ್ವಹಣೆಗಾಗಿ ನಾನು ಕಿಡ್ನಿಯನ್ನು ಮಾರುವ ಅನಿವಾರ್ಯತೆಗೆ ಸಿಲುಕಿದ್ದೇನೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇಂತಹ ಹಲವಾರು ಪ್ರಕರಣಗಳು ಅಫ್ಘಾನಿಸ್ತಾನದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ನಡುವೆ ಗುಲ್ಬುದ್ದೀನ್ ತಮ್ಮ ಕಿಡ್ನಿಯೊಂದನ್ನು ಮಾರಾಟ ಮಾಡಿರುವುದರಿಂದ ದೈಹಿಕವಾಗಿ ತನ್ನಿಂದ ಯಾವುದೇ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಷಾಧಿಸಿದರು.
ಎಗ್ಗಿಲ್ಲದೆ ನಡೆಯುತ್ತಿರುವ ಮಕ್ಕಳ ಮಾರಾಟ ದಂಧೆ
ಬಡತನ, ಕುಟುಂಬದ ನಿರ್ವಹಣೆಗಾಗಿ ಅಫ್ಘಾನಿಸ್ತಾನದಲ್ಲಿ ಮಕ್ಕಳ ಮಾರಾಟ ದಂಧೆ ಕೂಡ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಅಫ್ಘಾನಿಸ್ತಾನದ ತಾಲಿಬಾನ್ ವಶಪಡಿಸಿಕೊಂಡ ಬಳಿಕ ವಿಶ್ವ ಬ್ಯಾಂಕ್, ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತು ಯು.ಎಸ್. ಫೆಡರಲ್ ರಿಸರ್ವ್ ಅಫ್ಘಾನಿಸ್ತಾನದ ಅಂತರಾಷ್ಟ್ರೀಯ ನಿಧಿಯ ಹೂಡಿಕೆಯನ್ನು ಕಡಿತಗೊಳಿಸಿದ್ದವು.
ಸದ್ಯ ಅಫ್ಘಾನಿಸ್ತಾನದಲ್ಲಿ ನಿರುದ್ಯೋಗ, ಬಡತನ ಮತ್ತು ಹಸಿವು ಆತಂಕಕಾರಿ ಮಟ್ಟವನ್ನು ತಲುಪಿದೆ ಎಂದು ಹೇಳಲಾಗಿದೆ.