ಅಮೆರಿಕ ಸೇನೆ ಮುಕ್ತವಾಗುತ್ತಿರುವ ಅಫ್ಘಾನಿಸ್ತಾನ; ಕಾಬೂಲ್ ವಿಮಾನ ನಿಲ್ದಾಣವನ್ನು ಮುಚ್ಚಿದ ತಾಲಿಬಾನ್

Prasthutha|

ಕಾಬೂಲ್: ಬರೋಬ್ಬರಿ 20 ವರ್ಷಗಳ ಬಳಿಕ ಅಫ್ಘಾನಿಸ್ತಾನವು ಅಮೆರಿಕ ಸೈನ್ಯ ಮುಕ್ತವಾಗುವ ಹಂತಕ್ಕೆ ಕ್ಷಣಗಣನೆ ಆರಂಭವಾಗಿದೆ. ತನ್ನ ಸೇನೆಯು ದೇಶ ತೊರೆಯುವ ಗಡುವು ನಿಕಟವಾಗುವುದರೊಂದಿಗೆ ಬಹುತೇಕ ಸೈನಿಕರನ್ನು ಮತ್ತು ನಾಗರಿಕರನ್ನು ಅಮೆರಿಕ ವಾಪಸ್ ಕರೆಸಿಕೊಂಡಾಗಿದೆ. ಮಂಗಳವಾರ ದಿನಾಂತ್ಯಕ್ಕೆ ಇದು ಪೂರ್ಣವಾಗಲಿದೆ. ಆಗಸ್ಟ್ 31 ರ ಗಡುವಿನೊಳಗೆ ಅಫ್ಗಾನಿಸ್ತಾನವನ್ನು ಸಂಪೂರ್ಣವಾಗಿ ತೊರೆಯುವ ಕ್ರಿಯೆಯ ಭಾಗವಾಗಿ ಯುಎಸ್ ಮತ್ತು ಬ್ರಿಟಿಷ್ ಮಿಲಿಟರಿ ವಿಮಾನಗಳು ಕಾಬೂಲ್‌ ಗೆ ಬಂದಿದ್ದವು. ಅವುಗಳು ಸೈನಿಕರೊಂದಿಗೆ ಹಿಂತಿರುಗಿತ್ತು.

ಈ ಬೆಳವಣಿಗೆಯೊಂದಿಗೆ ತಾಲಿಬಾನ್ ವಿಶೇಷ ನಿರ್ಧಾರವೊಂದನ್ನು ಮಾಡಿ ಕಾಬೂಲ್ ವಿಮಾನ ನಿಲ್ದಾಣವನ್ನು ಮುಚ್ಚಿದೆ. ಈ ಕ್ರಮವು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ ಅಫ್ಘಾನ್ನರನ್ನು ನಿಯಂತ್ರಿಸುವ ಕಾರ್ಯದ ಒಂದು ಭಾಗಮಾತ್ರವಾಗಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ.

- Advertisement -

ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ತಾಲಿಬಾನ್ ಈಗಾಗಲೇ ಹೆಚ್ಚು ಚೆಕ್ ಪೋಸ್ಟುಗಳನ್ನು ಸ್ಥಾಪಿಸಿದೆ. ಸಮವಸ್ತ್ರ ಧರಿಸಿ ರಾತ್ರಿಯ ಸಮಯದಲ್ಲಿ ದೃಷ್ಟಿಶಕ್ತಿಯನ್ನು ಹೆಚ್ಚು ಮಾಡುವ ವಿಶೇಷ ಕನ್ನಡಕ ಧರಿಸಿ ತಾಲಿಬಾನ್ ಸೈನಿಕರು ಚೆಕ್‌ ಪೋಸ್ಟ್‌ಗಳಲ್ಲಿ ಗಸ್ತು ತಿರುಗುವ ದೃಶ್ಯವು ಕಾಣಸಿಗುತ್ತಿದೆ. ಬುಧವಾರದ ಬಳಿಕ ಕಾಬೂಲ್ ವಿಮಾನ ನಿಲ್ದಾನವನ್ನು ತಾಲಿಬಾನ್ ಸರಕಾರ ತನ್ನ ಪೂರ್ಣ ನಿಯಂತ್ರಣದಲ್ಲಿ ತೆರೆಯಲಿದೆ.

ಡೊನಾಲ್ದ್ ಟ್ರಂಪ್ ಅಫ್ಘಾನಿಸ್ತಾನದಿಂದ ಸೈನ್ಯವನ್ನು ವಾಪಾಸ್ ತೆಗೆಯುವ ಘೋಷಣೆ ಮಾಡಿದ್ದರು. ಜೋ ಬೈಡನ್ ಅಧ್ಯಕ್ಷರಾದ ಬಳಿಕ ಈ ಘೋಷಣೆಯನ್ನು ಕಾರ್ಯರೂಪಕ್ಕೆ ತರಲಾರಂಭಿಸಲು ತಾಲಿಬಾನಿನೊಂದಿಗೆ ಒಪ್ಪಂದ ಮಾಡಿಕೊಂಡು ಸೇನಾ ವಾಪಸಾತಿ ಕಾರ್ಯ ಚುರುಕುಗೊಳಿಸಿದರು. ಇದರೊಂದಿಗೆ ತಾಲಿಬಾನ್ ಒಂದೊಂದೇ ಪ್ರಾಂತ್ಯಗಳನ್ನು ವಶಪಡಿಸುತ್ತಾ ಸಾಗಿತು. ಆಗಷ್ಟ್ 14 ರ ವೇಳೆಗೆ ಅಫ್ಘಾನ್ ಪೂರ್ಣವಾಗಿ ತಾಲಿಬಾನ್ ಹಿಡಿತಕ್ಕೆ ಬಂದಿತ್ತು. ಆಗಸ್ಟ್ 31 ಅಮೆರಿಕ ಸೈನ್ಯದ ಪೂರ್ಣ ವಾಪಸಾತಿಗೆ ತಾಲಿಬಾನ್ ವಿಧಿಸಿದ ಕೊನೆಯ ದಿನವಾಗಿದೆ.

- Advertisement -