ಅದಾನಿ ಎಂಟರ್‌ಪ್ರೈಸಸ್ ಎಫ್​ಪಿಒ ರದ್ದು| ಹೂಡಿಕೆದಾರರಿಗೆ ಹಣ ಮರಳಿಸಲು ನಿರ್ಧಾರ

Prasthutha|

ಹೊಸದಿಲ್ಲಿ: ಎಫ್‌ಪಿಒ ರದ್ದುಗೊಳಿಸಿದ ಅದಾನಿ ಎಂಟರ್‌ಪ್ರೈಸಸ್ ಹೂಡಿಕೆದಾರರ ಹಣವನ್ನು ಮರಳಿಸಲು ನಿರ್ಧರಿಸಿದೆ.

ಎಫ್​ಪಿಒ ಮುಂದುವರಿಸುವುದು ನೈತಿಕವಾಗಿ ಸರಿಯಲ್ಲ ಎಂದು ಅನಿಸುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅದಾನಿ ಎಂಟರ್‌ಪ್ರೈಸಸ್ ಕಂಪನಿ ಹೇಳಿದೆ.

- Advertisement -

ಅದಾನಿ ಎಂಟರ್‌ಪ್ರೈಸಸ್ ಜನವರಿ 27ರಿಂದ 31ರವರೆಗೆ ಎಫ್​ಪಿಒ ಆಫರ್ ಕೊಟ್ಟಿತ್ತು. ಹಿಂಡನ್‌ಬರ್ಗ್ ವರದಿ (Hindenburg Research Report) ಬಳಿಕ ಅದಾನಿ ಗ್ರೂಪ್​ನ ವಿವಿಧ ಕಂಪನಿಗಳ ಷೇರುಗಳು ವಿಪರೀತವಾಗಿ ಕುಸಿದು ಬಿದ್ದಿರುವ ಹಿನ್ನೆಲೆಯಲ್ಲಿ ನೈತಿಕ ದೃಷ್ಟಿಯಿಂದ ಈ ಯೋಜನೆಯನ್ನು ರದ್ದು ಮಾಡಿ ಹಣ ಹೂಡಿದವರಿಗೆ ಕಂಪನಿ ಹಣ ವಾಪಸ್ ಮಾಡುತ್ತಿದೆ ಎನ್ನಲಾಗಿದೆ.

“ಇವತ್ತು ಮಾರುಕಟ್ಟೆ ಪರಿಸ್ಥಿತಿ ವಿಶೇಷವಾಗಿದ್ದು, ನಮ್ಮ ಏರು ಬೆಲೆಯಲ್ಲಿ ಬಹಳ ವ್ಯತ್ಯಯವಾಗಿದೆ. ಈ ಅಸಾಧಾರಣ ಸಂದರ್ಭದಲ್ಲಿ ಎಫ್​ಪಿಒ ಯೋಜನೆಯಲ್ಲಿ ಮುಂದುವರಿಯುವುದು ನೈತಿಕ ದೃಷ್ಟಿಯಿಂದ ಸರಿಯಲ್ಲ. ಹೂಡಿಕೆದಾರರ ಹಿತಾಸಕ್ತಿ ನಮಗೆ ಬಹಳ ಮುಖ್ಯವಾಗಿದ್ದು, ಅವರಿಗೆ ಯಾವುದೇ ರೀತಿಯ ಹಣಕಾಸು ನಷ್ಟದ ಸಾಧ್ಯತೆಯಿಂದ ರಕ್ಷಿಸುವುದು ಮುಖ್ಯ. ಆದ್ದರಿಂದ ಈ ಯೋಜನೆಯನ್ನು ಮುಂದುವರಿಸದಿರಲು ಆಡಳಿತ ಮಂಡಳಿ ನಿರ್ಧರಿಸಿದೆ” ಎಂದು ಅದಾನಿ ಎಂಟರ್‌ಪ್ರೈಸಸ್ ಚೇರ್ಮೆನ್ ಗೌತಮ್ ಅದಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತನ್ನ ಸಂಸ್ಥೆಯ ಎಫ್​ಪಿಒಗೆ ಬೆಂಬಲ ನೀಡಿದ ಹೂಡಿಕೆದಾರರಿಗೆ ಅದಾನಿ ಇದೇ ವೇಳೆ ಧನ್ಯವಾದ ಹೇಳಿದ್ದಾರೆ.

ಕಳೆದ ವಾರದಲ್ಲಿ ಷೇರು ಬೆಲೆಯಲ್ಲಿ ಕುಸಿತವಾದರೂ ಕಂಪನಿಯಲ್ಲಿ ಮತ್ತು ಅದರ ಆಡಳಿತ ಮತ್ತು ವ್ಯವಹಾರಗಳಲ್ಲಿ ನೀವು ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ನಿಜಕ್ಕೂ ಋಣಿಯಾಗಿದ್ದೇವೆ ಎಂದು ಅದಾನಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

- Advertisement -