ಹಿರಿಯ ನಟ ಎಸ್. ಶಿವರಾಮ್ ಇನ್ನಿಲ್ಲ

Prasthutha|

ಬೆಂಗಳೂರು: ಸ್ಯಾಂಡಲ್‍ವುಡ್ ಹಿರಿಯ ನಟ ಎಸ್. ಶಿವರಾಮ್ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿದ್ದರು.

- Advertisement -

ಶಿವರಾಮ್ ಅವರ ತಲೆಗೆ ಗಂಭೀರ ಗಾಯವಾಗಿದ್ದು ಬ್ರೈನ್ ಗೆ ಬಲವಾದ ಪೆಟ್ಟು ಬಿದ್ದಿತ್ತು. ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

- Advertisement -

ಕಂಬನಿ‌ ಮಿಡಿದ ಸಚಿವ ಕಾರಜೋಳ

ಕನ್ನಡ ಚಲನಚಿತ್ರರಂಗದ ಹಿರಿಯ ನಟ ಶಿವರಾಂ ಅವರ ನಿಧನದಿಂದ ಚಂದನವನ ಮತ್ತೊಬ್ಬ ಹಿರಿಯ ಕಲಾವಿದನನ್ನು ಕಳೆದುಕೊಂಡು ಅನಾಥವಾಗಿದೆ.

ಕನ್ನಡ ಚಲನಚಿತ್ರರಂಗದ ಹಿರಿಯಣ್ಣನಂತಿದ್ದ ಶಿವರಾಂ ಅವರು ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಿಂದ ಹಿಡಿದು ಇತ್ತೀಚಿನ ತಲೆಮಾರಿನ ನಿರ್ದೇಶಕರ ಚಿತ್ರಗಳಲ್ಲಿಯೂ ನಟಿಸಿ ಕನ್ನಡ ಚಿತ್ರರಂಗದ ದಂತಕಥೆಯಾಗಿದ್ದರು. ಶರಪಂಜರ, ನಾಗರಹಾವು ಮೊದಲಾದ ಚಿತ್ರಗಳಲ್ಲಿ ಅಮೋಘವಾಗಿ ನಟಿಸಿ ತಮ್ಮ ನಟನಾ ಕೌಶಲ್ಯ ತೋರಿಸಿದ್ದ ಶಿವರಾಂ ಅವರು ತಮ್ಮ ಇಳಿವಯಸ್ಸಿನಲ್ಲೂ ಪಾದರಸದಂತೆ ಕೆಲಸ ಮಾಡುತ್ತಿದ್ದರು. ಇವರ ನಿಧನದಿಂದ ನನ್ನ ಮನಸ್ಸಿಗೆ ತುಂಬಾ ದುಃಖವಾಗಿದೆ. ಇವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಮತ್ತು ಅವರ ಕುಟುಂಬದ ಸದಸ್ಯರಿಗೆ, ಅಪಾರ ಅಭಿಮಾನಿಗಳಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಂತಾಪ ಸೂಚಿಸಿದ್ದಾರೆ.

ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಾಳೆ ಭಾನುವಾರ ಸಕಲ ಪೊಲೀಸ್ ಗೌರವಗಳೊಂದಿಗೆ ನೆರವೇರಲಿದೆ.

ಕನ್ನಡ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕ, ನಿರ್ಮಾಪಕ, ನಟರಾಗಿ ಸುಮಾರು 6 ದಶಕಗಳ ಕಾಲ ನಿರಂತರ ಸೇವೆ ಸಲ್ಲಿಸಿದ್ದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಶರಪಂಜರ, ಶುಭಮಂಗಳ, ನಾಗರಹಾವು ಸೇರಿದಂತೆ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಅಮೋಘ ಅಭಿನಯ ನೀಡಿದ್ದರು. ಡ್ರೈವರ್ ಹನುಮಂತು ಚಿತ್ರದಲ್ಲಿ ನಾಯಕ ನಟರಾಗಿ ನಟಿಸಿದ್ದರು.

ಸಹೋದರ ಎಸ್ ರಾಮನಾಥನ್ ಅವರೊಂದಿಗೆ ಸೇರಿ ರಾಶಿ ಬ್ರದರ್ಸ್ ಸಂಸ್ಥೆ ಹುಟ್ಟುಹಾಕಿದ ಶಿವರಾಂ ಅವರು, ಡಾ. ರಾಜ್ ಕುಮಾರ್ ಅಭಿನಯದ ನಾನೊಬ್ಬ ಕಳ್ಳ, ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಗೆಜ್ಜೆಪೂಜೆ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸಿದ್ದರು. ಹೃದಯ ಸಂಗಮ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು.

1965ರಲ್ಲಿ ಬೆರತ ಜೀವ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದರ್ಪಾಣೆ ಮಾಡಿ, ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ಗಣನೀಯ ಸೇವೆ ಸಲ್ಲಿಸಿದ್ದಾರೆ. ಜೀವಮಾನದ ಸಾಧನೆಗಾಗಿ ಡಾ. ರಾಜ್ ಕುಮಾರ್ ಪ್ರಶಸ್ತಿ, ಡಾ. ಸರೋಜಾ ದೇವಿ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಕ್ಕೆ ಪಾತ್ರರಾಗಿದ್ದರು.

ಕನ್ನಡದ ವರನಟ ಡಾ.ರಾಜ್‌ಕುಮಾರ್ ಅವರೊಂದಿಗೆ ಸೇರಿ ಕಲಾವಿದರ ಸಂಘ ಕಟ್ಟುವಲ್ಲಿ ಅಪಾರವಾಗಿ ಶ್ರಮಿಸಿದ್ದರು. ದಕ್ಷಿಣ ಭಾರತದ ಜನಪ್ರಿಯ ನಟ ರಜನಿಕಾಂತ್ ಅವರೊಂದಿಗೆ ತಮಿಳು ಚಿತ್ರದಲ್ಲೂ ನಟಿಸಿದ್ದರು.

Join Whatsapp