ಪಿಎಸ್ಐ ಪರೀಕ್ಷೆ ಅಕ್ರಮ: ತಪ್ಪಿತಸ್ಥರಿಗೆ ಜೀವನ ಪರ್ಯಂತ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಬರೆಯದಂತೆ ಕ್ರಮ: ಡಿಜಿಪಿ ಪ್ರವೀಣ್ ಸೂದ್

Prasthutha|

ಬೆಂಗಳೂರು: ಸಬ್ ಇನ್ಸ್ ಪೆಕ್ಟರ್ (ಪಿಎಸ್ಐ) ಪರೀಕ್ಷೆಯಲ್ಲಿ ಅಕ್ರಮ ಕಂಡು ಬಂದಿಲ್ಲ. ಆದರೆ ಪರೀಕ್ಷಾ ಕೇಂದ್ರಗಳಲ್ಲಿ ನೀಡಿದ ಉತ್ತರ ಪ್ರತಿಗಳಲ್ಲಿ ಮ್ಯಾನಿಪ್ಲೇಟ್ (ಕೈಚಳಕ) ಮಾಡಿರುವುದರಿಂದ ಎಫ್ಐಆರ್ ದಾಖಲಿಸಿ ಪ್ರಕರಣದ ತನಿಖೆಯನ್ನು ಸಿಐಡಿಯಿಂದ ನಡೆಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದರು.

- Advertisement -


ಕೋರಮಂಗಲ ಕೆ.ಎಸ್ ಆರ್ ತುಕಡಿ ಮೈದಾನದಲ್ಲಿ ಇಂದು ನಡೆದ ಸೇವಾ ಕಾವಯತು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಐಡಿ ಅಧಿಕಾರಿಗಳು, ಕೆಲವರನ್ನು ಬಂಧಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ ಎಂದರು.
ರಾಜ್ಯ ಸರ್ಕಾರ 545 ಪಿಎಸ್ಐಗಳ ನೇಮಕಾತಿ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶದಂತೆ ಸೂಕ್ತ ರೀತಿಯಲ್ಲಿ ಪರೀಕ್ಷೆ ಮಾಡಲಾಗಿದೆ. ಪರೀಕ್ಷೆಯಲ್ಲಿ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.


ಪರೀಕ್ಷಾ ಕೇಂದ್ರಗಳಲ್ಲಿ ಉತ್ತರದ ಪ್ರತಿಗಳು ಮ್ಯಾನಿಪ್ಲೇಟ್ ಆಗಿರುವುದು ಕಂಡು ಬಂದಿದೆ. ಹಾಗಾಗಿ ಸಿಐಡಿ ಅಧಿಕಾರಿಗಳು ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆ ಆಗಿರುವ ಅಭ್ಯರ್ಥಿಗಳ ತನಿಖೆ ಮಾಡುತ್ತಿದ್ದಾರೆ. ನೂರು ಮಂದಿ ಅಭ್ಯರ್ಥಿಗಳನ್ನು ತನಿಖೆ ಮಾಡಿ ಮಾಹಿತಿ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ ಎಂದು ಹೇಳಿದರು.

- Advertisement -


ಉತ್ತರ ಪತ್ರಿಕೆ ಮ್ಯಾನಿಪ್ಲೇಟ್ ಮಾಡಿರುವ ಪರೀಕ್ಷಾ ಕೇಂದ್ರಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ. ಅದರಲ್ಲಿ ಭಾಗಿಯಾಗಿರುವ ಪರೀಕ್ಷಾ ಕೇಂದ್ರದ ಸಿಬ್ಬಂದಿಯನ್ನು ಬಂಧಿಸಿ ತನಿಖೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಪ್ರಕರಣ ಹಿಂದೆ ಯಾರಿದ್ದಾರೆ ಎನ್ನವುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ಕಠಿಣವಾದ ಕ್ರಮಕೈಗೊಳ್ಳಲಾಗುತ್ತದೆ. ಜೊತೆಗೆ ಮುಂದೆ ಯಾವುದೇ ಪರೀಕ್ಷೆಗಳಲ್ಲಿ ಭಾಗಿಯಾಗಲು ಸಾದ್ಯವಾಗದ ಹಾಗೇ ಮಾಡಲಾಗುತ್ತದೆ ಎಂದು ತಿಳಿಸಿದರು.
ಸಬ್ ಇನ್ಸ್ಪೆಕ್ಟರ್ ಗೆ ಯಾರು ಅಯ್ಕೆಯಾಗಿದ್ದಾರೆ, ಯಾರು ಅಗಿಲ್ಲ ಎಲ್ಲದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಪರೀಕ್ಷಾ ಕೇಂದ್ರದಲ್ಲಿ ಯಾರೆಲ್ಲಾ ಮ್ಯಾನುಪ್ಲೇಟ್ ಮಾಡಿದ್ದಾರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಜೀವನ ಪರ್ಯಂತ ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆ ಬರೆಯದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಯಾರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಪ್ರತಿಯೊಂದು ಉತ್ತರ ಪತ್ರಿಕೆಯನ್ನು ಮೂರು ಬಾರಿ ಪರಿಶೀಲನೆ ನಡೆಸಲಿದ್ದೇವೆ ಎಂದರು. ಪ್ರಾಮಾಣಿಕ ವಾಗಿ ಪರೀಕ್ಷೆ ಬರೆದವರಿಗೆ ಏನು ಆಗಲ್ಲ. ಆದರೆ ತಪ್ಪು ಮಾಡಿದವರಿಗೆ ಶಿಕ್ಷೆಯನ್ನು ಖಂಡಿತ ಅನುಭವಿಸಬೇಕಾಗುತ್ತದೆ ಎಂದರು.



Join Whatsapp