ಬೆಂಗಳೂರು: ಬೆಂಗಳೂರಲ್ಲಿ ಪದೇ ಪದೇ ಬಹುಮಹಡಿ ಕಟ್ಟಡಗಳು ನೆಲಸಮವಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಮುನ್ನೆಚ್ಚರಿಕೆ ಕ್ರಮವಾಗಿ ಸಭೆ ನಡೆಸಿ ವಿಸ್ತೃತ ಚರ್ಚೆ ನಡೆಸಿದೆ.
ಶಿಥಿಲಾವಸ್ಥೆಗೊಂಡ ಕಟ್ಟಡಗಳ ಗುರುತಿಸುವಿಕೆ, ಅಗ್ನಿ ನಿರೋಧಕಗಳಿಲ್ಲದ ಕಟ್ಟಡಗಳಿಗೆ ನೊಟೀಸ್ ನೀಡುವ ಕುರಿತು ಚರ್ಚೆ ನಡೆದಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
409 ಕಿ.ಮೀ.ನಷ್ಟು ರಸ್ತೆಯಲ್ಲಿ ಗುಂಡಿ ಬಿದ್ದಿದೆ, ಸದ್ಯ 246 ಕಿ.ಮೀ. ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚಲಾಗಿದೆ. 10 ದಿನಗಳಲ್ಲಿ ಪ್ರಮುಖ ರಸ್ತೆಗಳನ್ನು ದುರಸ್ತಿ ಮಾಡಲು ಸೂಚನೆ ಕೊಟ್ಟಿದ್ದೇವೆ. ಬಿಬಿಎಂಪಿ ವ್ಯಾಪ್ತಿಗೆ ಇತ್ತೀಚೆಗೆ ಸೇರಿದ 110 ಹಳ್ಳಿಗಳಿಗೆ ರಸ್ತೆ ಕಾಮಗಾರಿಗೆ 30 ದಿನಗಳಲ್ಲಿ ಚಾಲನೆ ನೀಡಲಾಗುವುದು ಎಂದು ಆರ್.ಅಶೋಕ್ ಹೇಳಿದರು.
ಬೆಂಗಳೂರಲ್ಲಿ 2019ರ ಸರ್ವೇ ಪ್ರಕಾರ ಶಿಥಿಲಾವಸ್ಥೆಯಲ್ಲಿ 185 ಕಟ್ಟಡಗಳನ್ನು ಗುರುತಿಸಲಾಗಿದೆ. ಇದರಲ್ಲಿ 10 ಕಟ್ಟಡ ಮಾತ್ರ ತೆರವು ಮಾಡಲಾಗಿದೆ, ಉಳಿದ 175 ಕಟ್ಟಡ ಒಡೆದಿಲ್ಲ, ವಾರದೊಳಗೆ ಎಲ್ಲರಿಗೂ ನೋಟೀಸ್ ನೀಡಲಾಗುವುದು. ಬಳಿಕ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತೇವೆ, ಬಳಿಕ ಬಿಬಿಎಂಪಿಯಿಂದ ಧ್ವಂಸ ಮಾಡುತ್ತೇವೆ. ಡೆಮಾಲಿಷನ್ ಮಾಡಿದ ವೆಚ್ಚವನ್ನು ಸೈಟ್ ಮೇಲಿನ ಆಸ್ತಿ ತೆರಿಗೆಗೆ ಸೇರಿಸಿ ಹಣ ವಸೂಲು ಮಾಡಲಾಗುವುದು. 2019ರ ಬಳಿಕ ಎರಡು ವರ್ಷಗಳಲ್ಲಿ ಶಿಥಿಲವಾಗಿರುವ ಕಟ್ಟಡಗಳ ಸರ್ವೇಗೂ ಸೂಚಿಸಿದ್ದೇವೆ ಎಂದು ಆರ್.ಅಶೋಕ್ ಹೇಳಿದರು.
ಮಳೆ ಬಿದ್ದು ಗುಂಡಿಗಳು ಹೆಚ್ಚಾಗಿವೆ. ಇದರಿಂದ ಹಲವರ ಸಾವು-ನೋವಾಗಿದೆ. ಸೆಪ್ಟಂಬರ್ 30ರೊಳಗೆ ಗುಂಡಿ ಮುಚ್ಚಬೇಕೆಂದು ಗಡುವು ಕೊಟ್ಟಿದ್ದೇವೆ. ಪ್ರತಿ ದಿನ 16 ಲೋಡು ಜೆಲ್ಲಿ ಅಗತ್ಯ ಇತ್ತು. ಪ್ಲಾಂಟ್ ನಿಂದ ಜೆಲ್ಲಿ ಮಿಕ್ಸರ್ ಕೆಲಸ ಮಾಡಲಿಲ್ಲ. ಹಾಗಾಗಿ ಗುಂಡಿ ಮುಚ್ಚುವುದು ವಿಳಂಬವಾಯಿತು. 243 ಕಿ.ಮೀ ರಸ್ತೆ ಗುಂಡಿ ಮುಚ್ಚಿದ್ದೇವೆ. ಪಾಲಿಕೆ ವ್ಯಾಪ್ತಿಯಲ್ಲಿ 13,872 ರಸ್ತೆಗಳಿವೆ, 1304 ಕಿ.ಮೀ.ರಸ್ತೆ ಪ್ರಮುಖವಾಗಿದೆ. 449 ಕಿ.ಮೀ. ರಸ್ತೆ ಹಾಳಾಗಿವೆ ಎಂದು ಆರ್.ಅಶೋಕ್ ವಿವರಿಸಿದರು.
10 ದಿನ ಕಾಲಾವಕಾಶವನ್ನು ಅಧಿಕಾರಿಗಳು ಕೇಳಿದ್ದಾರೆ. ಸಮಯ ಕೊಟ್ಟರೆ ಸಂಪೂರ್ಣ ಮುಚ್ಚುತ್ತೇವೆಂದಿದ್ದಾರೆ. ಮೊದಲು ಒಂದೇ ಸಂಸ್ಥೆಗೆ ಟೆಂಡರ್ ಕೊಟ್ಟಿದ್ದೆವು, ಈಗ ಎರಡು ಸಂಸ್ಥೆಗೆ ಟೆಂಡರ್ ಕೊಟ್ಟಿದ್ದೇವೆ. ಪ್ರತಿ ವಾರ್ಡ್ ಗೆ 20 ಲಕ್ಷ ಹಣ ಮೀಸಲಿದೆ. ಲೋಕಲ್ ಗುತ್ತಿಗೆದಾರರಿಗೆ ಟೆಂಡರ್ ಕೊಡುತ್ತೇವೆ. ಇಂಟೀರಿಯರ್ ರಸ್ತೆಗಳನ್ನು ಅವರು ಮುಚ್ಚುತ್ತಾರೆ. ಮೇಜರ್ ರಸ್ತೆಗಳನ್ನು ಡಾಂಬರ್ ಹಾಕುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಶಿಥಿಲ ಕಟ್ಟಡಗಳ ಬಗ್ಗೆ ಗಮನಕ್ಕೆ ಸಾರ್ವಜನಿಕರು ತರಬೇಕು. ಸಾರ್ವಜನಿಕರು ಮನೆಯ ಪಕ್ಕದಲ್ಲಿದ್ದರೆ ಅಧಿಕಾರಿಗಳಿಗೆ ತಿಳಿಸಬೇಕು. ಬಿಬಿಎಂಪಿ ಅಧಿಕಾರಿಗಳಿಗೆ ದೂರು ಕೊಡಬೇಕು. ಇಲ್ಲವೇ ನೇರವಾಗಿ ನನ್ನ ಗಮನಕ್ಕೆ ತನ್ನಿ, ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಶಿಥಿಲಾವಸ್ಥೆ ಕಟ್ಟಡ ಒಡೆಯಲು ಮನೆ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ಒಡೆಯದಿದ್ದರೆ. ಬೆಸ್ಕಾಂ, ಜಲಮಂಡಳಿ ಸಂಪರ್ಕ ಸಿಗುವುದಿಲ್ಲ. ನೋಟೀಸ್ ನೀಡಿದರೂ ಒಡೆಯದಿದ್ದರೆ ಪಾಲಿಕೆಯೇ ಒಡೆದುಹಾಕಲಿದೆ. ತಗುಲುವ ವೆಚ್ಚವನ್ನು ಅವರ ಆಸ್ತಿ ತೆರಿಗೆಗೆ ಹಾಕಲು ನಿರ್ಧಾರ ಮಾಡಲಾಗಿದೆ. ನಿಮ್ಮ ಅಕ್ಕಪಕ್ಕದ ಮನೆಯೂ ಇದೇ ರೀತಿ ಇದ್ದಲ್ಲಿ ಸಾರ್ವಜನಿಕರು ಬಿಬಿಎಂಪಿ ಹಾಗೂ ತನಗೆ ದೂರು ನೀಡಬಹುದು ಎಂದು ಸಚಿವ ಆರ್ ಅಶೋಕ್ ಹೇಳಿದರು.
ಕೋವಿಡ್ ನಿಂದ ಮೃತರಾದವರಿಗೆ ಪರಿಹಾರ ನೀಡುವ ವಿಚಾರದ ಬಗ್ಗೆ ಮಾತನಾಡಿದ ಆರ್.ಅಶೋಕ, ಗಂಡ ಸತ್ತರೆ ಹೆಂಡತಿಗೆ ಪರಿಹಾರ ನೀಡಲಾಗುವುದು. ಮಕ್ಕಳಿಗೆ ಪರಿಹಾರ ವಿಚಾರ ಬಂದಾಗ ಮೂರ್ನಾಲ್ಕು ಮಕ್ಕಳಿದ್ದರೆ, ಅವರೆಲ್ಲರೂ ಒಪ್ಪುವ ಒಬ್ಬರಿಗೆ ಮಾತ್ರ ಪರಿಹಾರ ನೀಡಲಾಗುವುದು. ಇಲ್ಲದಿದ್ದರೆ ಯಾರಿಗೂ ಪರಿಹಾರ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮಳೆ, ಕೋವಿಡ್, ನಗರೋತ್ಥಾನ ಉಸ್ತುವಾರಿ ನನಗೆ ಕೊಟ್ಟಿದ್ದಾರೆ. ಅದಕ್ಕಾಗಿ ಅಧಿಕಾರಿಗಳ ಸಭೆ ಮಾಡ್ತಿದ್ದೇನೆ. ಶೀಘ್ರವೇ ನಗರ ಉಸ್ತುವಾರಿ ಸಚಿವರ ಹೆಸರನ್ನು ಸಿಎಂ ಘೋಷಣೆ ಮಾಡಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.