ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ನಗರದ ಸುಂಕದಕಟ್ಟೆಯ ಯುವತಿ ಮೇಲಿನ ಆ್ಯಸಿಡ್ ದಾಳಿ ಪ್ರಕರಣದ ಚಾರ್ಜ್ ಶೀಟ್ (ಆರೋಪಪಟ್ಟಿ) ನ್ನು ಪೊಲೀಸ್ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಮೂರು ತಿಂಗಳ ಸುದೀರ್ಘ ತನಿಖೆಯ ಬಳಿಕ ಪೊಲೀಸರು 13ನೇ ಎಸಿಎಂಎಂ ಕೋರ್ಟ್ಗೆ 770 ಪುಟಗಳ ಪ್ರಾಥಮಿಕ ಚಾರ್ಜ್ ಶೀಟ್ ನ್ನು ತನಿಖಾಧಿಕಾರಿಗಳು ಸಲ್ಲಿಸಿದರು.
770 ಪುಟಗಳ ಪ್ರಾಥಮಿಕ ಆರೋಪಪಟ್ಟಿಯಲ್ಲಿ 92 ಸಾಕ್ಷಿಗಳನ್ನು ಉಲ್ಲೇಖಿಸಲಾಗಿದ್ದು, ಹಾಗೆಯೇ ಇಬ್ಬರು ಪ್ರಮುಖ ಸಾಕ್ಷಿಗಳ 164 ಹೇಳಿಕೆಗಳನ್ನೂ ದಾಖಲಿಸಿಕೊಳ್ಳಲಾಗಿದೆ.
ಆರೋಪಿ ಆ್ಯಸಿಡ್ ನಾಗ ಯುವತಿ ಮೇಲೆ ಆ್ಯಸಿಡ್ ಎರಚಿದ ಮೇಲೆ ತನ್ನ ಸಹೋದರನಿಗೆ ಕರೆ ಮಾಡಿದ್ದ ಆಡಿಯೋ ಸೇರಿ ಹಲವು ವಾಯ್ಸ್ ರೆಕಾರ್ಡ್ಗಳನ್ನು ಎಫ್ಎಸ್ಎಲ್ಗೆ ರವಾನೆ ಮಾಡಲಾಗಿದ್ದು, ಅದು ಆರೋಪಿ ನಾಗೇಶನ ಧ್ವನಿ ಎಂಬುದು ಖಚಿತವಾಗಿದೆ. ಈ ಹಿಂದೆ ನಾಗೇಶ್ ಹಾಗೂ ಸಂತ್ರಸ್ತೆಯ ಹೇಳಿಕೆಯಲ್ಲಿ ನೀಡಿರುವ ಅಂಶಗಳು ಚಾರ್ಜ್ ಶೀಟ್ನಲ್ಲಿ ಉಲ್ಲೇಖವಾಗಿವೆ. ಸಾಕಷ್ಟು ಸಿಸಿಟಿವಿಗಳ ಸಾಕ್ಷಿಗಳನ್ನು ಸಹ ಕೋರ್ಟ್ಗೆ ಸಲ್ಲಿಸಲಾಗಿದೆ