►ಇಂದಿನಿಂದ ಉದ್ಯೋಗ ಬಯಸುವ ಭಾರತೀಯರಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕಡ್ಡಾಯ
ನವದೆಹಲಿ: ಇನ್ನು ಮುಂದೆ ಸೌದಿ ಅರೇಬಿಯಾದಲ್ಲಿ ಉದ್ಯೋಗ ಬಯಸುವ ಭಾರತೀಯರಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (ಪಿಸಿಸಿ) ಕಡ್ಡಾಯಗೊಳಿಸಲಾಗಿದ್ದು, ಅಪರಾಧ ಪ್ರಕರಣಗಳಲ್ಲಿ ಇರುವ ಆರೋಪಿಗಳು ಇನ್ನು ಸೌದಿಗೆ ತೆರಳುವಂತಿಲ್ಲ ಎಂದು ರಾಷ್ಟ್ರ ರಾಜಧಾನಿಯಲ್ಲಿ ಕಾರ್ಯಾಚರಿಸುತ್ತಿರುವ ಸೌದಿ ಅರೇಬಿಯಾದ ರಾಯಭಾರ ಕಚೇರಿ ಘೋಷಿಸಿದೆ.
ಯಾವುದೇ ಉದ್ಯೋಗ ವೀಸಾ ಅನುಮೋದನೆಗಾಗಿ ಮೊದಲು ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಒದಗಿಸುವಂತೆ ಮುಂಬೈನಲ್ಲಿರುವ ಸೌದಿ ಅರೇಬಿಯಾದ ಕಾನ್ಸುಲೇಟ್ ಟ್ರಾವೆಲ್ ಏಜೆಂಟರಿಗೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಹೊಸ ನಿಯಮವು ಆಗಸ್ಟ್ 22 ರಿಂದಲೇ ಜಾರಿಗೆ ತರಲಾಗಿದೆ.
ನವದೆಹಲಿಯ ಸೌದಿ ಅರೇಬಿಯಾದ ರಾಯಭಾರ ಕಚೇರಿಯಲ್ಲಿ ಕಡ್ಡಾಯ ಪಿಸಿಸಿ ನಿಯಮವು ಈಗಾಗಲೇ ಕೆಲವು ಸಮಯದಿಂದ ಅಸ್ತಿತ್ವದಲ್ಲಿದ್ದು, ಪೊಲೀಸ್ ಠಾಣೆಗಳ ವಿನಂತಿಯ ಮೇರೆಗೆ ಪಾಸ್ಪೋರ್ಟ್ ಕಚೇರಿಗಳು ಪಿಸಿಸಿಗಳನ್ನು ನೀಡುತ್ತವೆ.
ಅಪರಾಧ ಮುಕ್ತ ಎಂದು ದೇಶದ ವರ್ಚಸ್ಸನ್ನು ಉಳಿಸಿಕೊಳ್ಳಲು ಪಿಸಿಸಿ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಕಾನೂನು ಪಾಲಿಸುವ ಸಂಭಾವ್ಯ ಉದ್ಯೋಗಿಗಳು ಮಾತ್ರ ಸೌದಿ ಅರೇಬಿಯಾಕ್ಕೆ ಕೆಲಸ ಮಾಡಲು ಬರುವುದನ್ನು ಖಚಿತಪಡಿಸಲು ಬೇಕಾಗಿ ಈ ನಿಯಮ ಜಾರಿಗೆ ತರಲಾಗಿದೆ ಎಂದು ಸೌದಿ ಸರಕಾರ ತಿಳಿಸಿದೆ.