ಕಾಂಗ್ರೆಸ್ ನ ‘ಎಸ್ಪಿ ಚಲೋ’ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಕೊಕ್: ಕೊಡಗಿನಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿ

Prasthutha|

ಮಡಿಕೇರಿ: ದಿನಾಂಕ 24-08-2022ರ ಬೆಳಿಗ್ಗೆ 6.00 ಗಂಟೆಯಿಂದ ದಿನಾಂಕ 27-08-2022 ರಂದು ಸಂಜೆ 6.00 ಗಂಟೆಯವರೆಗೆ ಕೊಡಗು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದ್ದು, ಕಾಂಗ್ರೆಸ್ ಹಮ್ಮಿಕೊಂಡ ‘ಎಸ್ಪಿ ಚಲೋ’ ಕಾರ್ಯಕ್ರಮ ಸಹಿತ ವಿವಿಧ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ಕೊಕ್ ನೀಡಿದೆ.

- Advertisement -

ಕೋಮುಸೂಕ್ಷ್ಮ ಕೊಡಗು ಜಿಲ್ಲೆಯಲ್ಲಿ ಯಾವುದೇ ರಾಜಕೀಯ, ಮತೀಯ, ಸಾರ್ವಜನಿಕ ಸಭೆ, ಮೆರವಣಿಗೆ, ಪ್ರತಿಭಟನೆಗಳಿಗೆ ಅವಕಾಶ ನೀಡಿದ್ದಲ್ಲಿ ಕೋಮು ಗಲಭೆ ಉಂಟಾಗುವ ಸಾದ್ಯತೆ ಇದ್ದು, ಇದರಿಂದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಉಂಟಾಗುವ, ಜಿಲ್ಲೆಯಲ್ಲಿ ಶಾಂತಿ ಕದಡುವ, ಸಾರ್ವಜನಿಕರ ದೈನಂದಿನ ಜೀವನ ಅಸ್ತವ್ಯಸ್ತವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದುದರಿಂದ ಕೊಡಗು ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ದಿನಾಂಕ 24-08-2022ರ ಬೆಳಿಗ್ಗೆ 06.00 ಗಂಟೆಯಿಂದ ದಿನಾಂಕ 27-08-2022 ರಂದು ಸಂಜೆ 06.00 ಗಂಟೆಯವರೆಗೆ ಜಿಲ್ಲೆಯಾದ್ಯಂತ (ಪೂರ್ವ ಯೋಜಿತ ಮದುವೆ, ನಾಮಕರಣ, ಗೃಹಪ್ರವೇಶ ಕಾರ್ಯಕ್ರಮ ಹಾಗೂ ಸರ್ಕಾರಿ ಕಾರ್ಯಕ್ರಮಗಳನ್ನು ಹೊರತುಪಡಿಸಿ) ಯಾವುದೇ ಸಭೆ ಸಮಾರಂಭಗಳನ್ನು ನಡೆಸದಂತೆ ಆಜ್ಞೆ ಹೊರಡಿಸಲಾಗಿದೆ.

- Advertisement -

ಪ್ರತಿಭಟನೆ, ಮೆರವಣಿಗೆ, ರ್ಯಾಲಿ, ಜಾಥ ನಡೆಸದಂತೆ, 5 ಮತ್ತು ಅದಕ್ಕಿಂತ ಹೆಚ್ಚು ಜನರು ಗುಂಪು ಸೇರದಂತೆ, ವಿಜಯೋತ್ಸವ ನಡೆಸದಂತೆ, ಪಟಾಕಿ ಸಿಡಿಸದಂತೆ , ಕಪ್ಪು ಬಟ್ಟೆ ಧರಿಸದಂತೆ ಮತ್ತು ಕಪ್ಪು ಬಾವುಟ ಹಿಡಿಯದಂತೆ, ಧ್ವನಿವರ್ಧಕ ಬಳಸಿ ಪ್ರಚೋದನಾತ್ಮಕ ಘೋಷಣೆ ಕೂಗದಂತೆ, ವಾಹನಗಳಲ್ಲಿ ಪ್ರಚೋದನಾತ್ಮಕ ಫಲಕ / ಬಾವುಟಗಳನ್ನು ಅಳವಡಿಸದಂತೆ ಹಾಗೂ ಯಾವನೇ ವ್ಯಕ್ತಿಯು ಆಯುಧಗಳನ್ನು ಹಿಡಿದುಕೊಂಡು ತಿರುಗಾಡದಂತೆಯೂ, ಭಾಷಣ ನಡೆಸದಂತೆಯೂ ಹಾಗೂ ಯಾವುದೇ ವಾರದ ಸಂತೆಯನ್ನು ಸಹ ನಡೆಸದಂತೆ ಮುಂಜಾಗೃತಾ ಕ್ರಮಕ್ಕಾಗಿ ಕೊಡಗು ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಮೊಟ್ಟೆ ದಾಳಿ ಮಾಡಿದ ಪ್ರಕರಣವನ್ನು ವಿರೋಧಿಸಿ ಕಾಂಗ್ರೆಸ್ ಆಗಸ್ಟ್ 26 ರಂದು ಎಸ್ಪಿ ಕಚೇರಿ ಚಲೋ ಸಹಿತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು . ಆದರೆ ಇದೀಗ ಜಿಲ್ಲಾಡಳಿತವು ನಿಷೇಧಾಜ್ಞೆ ಹೊರಡಿಸಿದ್ದು ಕಾಂಗ್ರೆಸ್ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎಂದು ಕಾದುನೋಡಬೇಕಿದೆ.



Join Whatsapp