ಚಿಕ್ಕಬಳ್ಳಾಪುರ: ಲಾರಿ ಮತ್ತು ಜೀಪ್ ನಡುವೆ ಸಂಭವಿಸಿದ ನೇರ ಮುಖಾಮುಖಿಯಲ್ಲಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ಸಮೀಪದ ಅಲವಾಟ ಗೇಟ್ ಬಳಿ ನಡೆದಿದೆ.
ಭಾನುವಾರ ಸಂಜೆ 4 ಗಂಟೆಗೆ ಈ ದುರ್ಷಟನೆ ನಡೆದಿದ್ದು, ಮೃತರ ಗುರುತು ಪತ್ತೆಯಾಗಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಜೀಪಿನಲ್ಲಿ 11 ಮಂದಿಯಿದ್ದು 4 ಮಂದಿ ಗಂಭೀರ ಗಾಯಗೊಂಡ ನಿಟ್ಟಿನಲ್ಲಿ ಚಿಂತಾಮಣಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ತಾಡಿಗೋಲ್ ನಿಂದ ಚಿಂತಾಮಣಿಗೆ ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಜೀಪ್ ಗೆ, ಎದುರಿನಿಂದ ಅತೀವೇಗದಲ್ಲಿ ಬಂದ ಲಾರಿ ಡಿಕ್ಕಿಯಾದ ಹಿನ್ನೆಲೆಯಲ್ಲಿ ಜೀಪ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.