ಮಂಗಳೂರು: ತಲಪಾಡಿ- ಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ಸುರತ್ಕಲ್ ಎಂಬಲ್ಲಿ ಅಕ್ರಮವಾಗಿ ಟೋಲ್ ಗೇಟ್ ನಿರ್ಮಿಸಿ ಹಲವು ವರ್ಷಗಳಿಂದ ಕಾನೂನಿಗೆ ವಿರುದ್ಧವಾಗಿ ಟೋಲ್ ಸಂಗ್ರಹ ಮಾಡುತ್ತಿರುವುದನ್ನು ತಕ್ಷಣ ನಿಲ್ಲಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕ್ರಮ ವಹಿಸಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.
ಟೋಲ್ ಗೇಟ್ ತೆರವು ಮಾಡುವಂತೆ ಹಲವು ದಿನಗಳಿಂದ ಪ್ರತಿಭಟನಕಾರರು ಸಾರ್ವಜನಿಕರ ಪರವಾಗಿ ಹೋರಾಟ ನಡೆಸುತ್ತಿದ್ದಾರೆ. ಸರಕಾರ ಜನರ ಭಾವನೆಗಳಿಗೆ, ಅಭಿಪ್ರಾಯಗಳಿಗೆ ಸ್ಪಂದಿಸಬೇಕಾಗಿದೆ. ಸರಕಾರಗಳೇ ಇದೊಂದು ಅಕ್ರಮ ಟೋಲ್ ಗೇಟ್ ಎಂದು ಶಾಸನ ಸಭೆಯಲ್ಲೇ ಒಪ್ಪಿಕೊಂಡಿದ್ದು, ಟೋಲ್ ಗೇಟ್ ತೆರವು ಮಾಡದಿರುವುದು ಸರಿಯಾದ ಕ್ರಮವಲ್ಲ. ಸರಕಾರವೇ ನಿಯಮವನ್ನು ಉಲ್ಲಂಘಿಸುತ್ತಿದ್ದು, ಉಲ್ಲಂಘನೆ ಆಗುತ್ತಿರುವುದು ಗಮನಕ್ಕೆ ಬಂದ ನಂತರ ಕೂಡ ರಸ್ತೆ ಶುಲ್ಕ ಸಂಗ್ರಹ ಮಾಡುತ್ತಿರುವುದು ಕಾನೂನು ಬಾಹಿರ ಮಾತ್ರವಲ್ಲದೆ ಅನೈತಿಕ ಮತ್ತು ಜನವಿರೋಧಿ ನೀತಿಯಾಗಿದೆ ಎಂದು ಆಮ್ ಆದ್ಮಿ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸಂತೋಷ್ ಕಾಮತ್ ಟೀಕಿಸಿದ್ದಾರೆ.
ಬಿಜೆಪಿ ಸರಕಾರ ಈಗಾಗಲೇ ಜನರ ಪ್ರಾಣ ಹಿಂಡುವ ನೀತಿಗಳನ್ನು ಅನುಸರಿಸುತ್ತಿದೆ. ನೋಟ್ ಬ್ಯಾನ್, ಜಿಎಸ್ಟಿ ತೆರಿಗೆ, ಅವೈಜ್ಞಾನಿಕ ಲಾಕ್ ಡೌನ್ ಮುಂತಾದವು ಸೇರಿದಂತೆ ತಪ್ಪು ಆರ್ಥಿ ನೀತಿಯಿಂದಾಗಿ ಜನರು ಬದುಕು ಬೀದಿಗೆ ಬಂದಿದೆ. ಸಣ್ಣ ವ್ಯಾಪಾರಿಗಳು, ಗುಡಿಕೈಗಾರಿಕೆಗಳು ನಷ್ಟದಲ್ಲಿವೆ, ಕಾರ್ಮಿಕರು, ವಿದ್ಯಾವಂತರು ನಿರುದ್ಯೋಗಿಗಳಾಗಿದ್ದಾರೆ. ವಿಪರೀತವಾದ ಬೆಲೆ ಏರಿಕೆ ಸಮಸ್ಯೆ ಜನರನ್ನು ಕಾಡುತ್ತಿದೆ. ಇದರೊಂದಿಗೆ ಸರಕಾರ ಅಕ್ರಮವಾಗಿ ಟೋಲ್ ಗೇಟ್ ಮೂಲಕ ಜನರ ಸುಲಿಗೆ ಮಾಡುತ್ತಿದೆ. ಇಂತಹ ಅನ್ಯಾಯಗಳನ್ನು ನಿಲ್ಲಿಸಬೇಕು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನಾಗರಿಕರು, ಸಂಘಟನೆಗಳು ಸೇರಿ ನಡೆಸುತ್ತಿರುವ ಪ್ರತಿಭಟನೆಗೆ ಸರಕಾರ ಮನ್ನಣೆ ನೀಡಿ ಟೋಲ್ ಗೇಟ್ ತಕ್ಷಣ ನಿಲ್ಲಿಸಬೇಕು ಎಂದವರು ಒತ್ತಾಯಿಸಿದ್ದಾರೆ.
ಆಮ್ ಆದ್ಮಿ ಪಕ್ಷ ಆರಂಭದಿಂದಲು ಸುರತ್ಕಲ್ ನಲ್ಲಿರುವ ಅಕ್ರಮ ಟೋಲ್ ಗೇಟ್ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಭಾಗವಹಿಸಿದೆ. ಮಾತ್ರವಲ್ಲದೆ, ಇತ್ತೀಚೆಗ ಮಂಗಳೂರಿಗೆ ಆಗಮಿಸಿದ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ವಿದ್ಯಾವಂತರ ಜಿಲ್ಲೆಯಲ್ಲೇ ಇಂತಹ ಹಗಲು ದರೋಡೆಗೆ ಅವಕಾಶ ದೊರೆಯಬಾರದಿತ್ತು. ಇದೊಂದು ಅಕ್ರಮ ಟೋಲ್ ಗೇಟ್ ಎಂದು ಸರಕಾರ ಒಪ್ಪಿಕೊಂಡು ಹಲವು ತಿಂಗಳುಗಳೇ ಕಳೆಯಿತು. ತೆರವಿಗೊಂದು ಆದೇಶ ಹೊರಡಿಸಲು ಸರಕಾರಯಾಕೆ ವಿಳಂಬ ಮಾಡುತ್ತಿದೆ ಎಂಬುದು ಪ್ರಶ್ನಾರ್ಹವಾಗಿದೆ ಎಂದು ಸಂತೋಷ್ ಕಾಮತ್ ಪ್ರಶ್ನಿಸಿದ್ದಾರೆ.