ನವದೆಹಲಿ: ಬಿಜೆಪಿ ಸಂಸದ ಮನೋಜ್ ತಿವಾರಿ ದೆಹಲಿ ಮುಖ್ಯಮಂತ್ರಿ ಅರರವಿಂದ ಕೇಜ್ರಿವಾಲ್’ರನ್ನು ಕೊಲ್ಲಲು ಸಂಚು ನಡೆಸಿದ್ದಾರೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪ ಮಾಡಿದ್ದಾರೆ. ಕೂಡಲೇ ಆ ಬಿಜೆಪಿ ನಾಯಕನನ್ನು ಬಂಧಿಸುವಂತೆ ಆಮ್ ಆದ್ಮಿ ಪಕ್ಷದವರು ಒತ್ತಾಯಿಸಿದ್ದಾರೆ.
ಗುಜರಾತ್ ಚುನಾವಣೆ ಜೊತೆಗೆ ದೆಹಲಿ ಮನಪಾ ಚುನಾವಣೆ ಇರುವುದರಿಂದ ಸಿಸೋಡಿಯಾ ಎರಡೂ ಕಡೆ ಓಡಾಡುತ್ತಿದ್ದಾರೆ.
ದಿಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಸೋಡಿಯಾ ಅವರು, ಬಿಜೆಪಿ ಸಂಸದ ಮನೋಜ್ ತಿವಾರಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್’ರನ್ನು ಮುಗಿಸುವ ಸಂಚು ಹೂಡಿದ್ದಾರೆ, ಕೂಡಲೆ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಎಎಪಿ ಅಭ್ಯರ್ಥಿಯೊಬ್ಬರನ್ನು ಆ ಪಕ್ಷದವರೇ ಓಡಿಸಿದರು, ಎಎಪಿಯ ಯಾರಿಗೂ ರಕ್ಷಣೆ ಇಲ್ಲ; ಕೇಜ್ರಿವಾಲ್ ಯಾವ ಲೆಕ್ಕ, ನೀವು ಕೇಜ್ರಿವಾಲ್ ಮೇಲೆ ದಾಳಿ ಮಾಡಿ ಎಂದಿತ್ಯಾದಿಯಾಗಿ ಮನೋಜ್ ತಿವಾರಿ ಟ್ವೀಟ್ ಮಾಡಿದ್ದರು. ಕೆಲವು ವಾಕ್ಯಗಳು ಅರವಿಂದ ಕೇಜ್ರಿವಾಲ್’ರನ್ನು ಮುಗಿಸುವ ಸಂಚು ರೂಪಿಸಿದಂತೆ ಇದೆ ಎಂದು ಸಿಸೋಡಿಯಾ ಆರೋಪ ಮಾಡಿದ್ದಾರೆ.
“ಎಎಪಿ ಮೇಲೆ ಅದರ ಕಾರ್ಯಕರ್ತರೇ ಸಿಟ್ಟಾಗಿದ್ದಾರೆ. ಅರವಿಂದ ಕೇಜ್ರಿವಾಲ್’ರ ಸುರಕ್ಷತೆ ಬಗ್ಗೆ ನನಗೆ ಚಿಂತೆಯಾಗಿದೆ. ಅವರ ಕಾರ್ಯಕರ್ತರೇ ಅವರನ್ನು ಮುತ್ತುವರು. ವಾರ್ಡ್ ಟಿಕೆಟ್ ಮಾರಿದ್ದಾರೆ. ಅವರ ಒಬ್ಬರು ಜೈಲಿನಲ್ಲಿ ಅತ್ಯಾಚಾರಿಯಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದಾರೆ” ಎಂದಿತ್ಯಾದಿಯಾಗಿ ಮನೋಜ್ ತೀವ್ರವಾಗಿ ಟ್ವೀಟ್ ಮಾಡಿದ್ದರು.