ಮೈಸೂರು: ಸೌದೆ ತರಲು ಕಾಡಿಗೆ ಹೋದ ಯುವಕ ಹುಲಿ ದಾಳಿಗೆ ಬಲಿ

Prasthutha|

ಮೈಸೂರು: ಸೌದೆ ತರಲು ಕಾಡಿಗೆ ಹೋದ ಬಾಲಕನ ಮೇಲೆ ಹುಲಿ ದಾಳಿ ಮಾಡಿ ಕೊಲೆಗೈದಿರುವ ಘಟನೆ ನಾಗರಹೊಳೆ ಅರಣ್ಯ ವ್ಯಾಪ್ತಿಯ ಎಚ್.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಸಮೀಪ ನಡೆದಿದೆ.

- Advertisement -

ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಬಳ್ಳೆ ಹಾಡಿಯ ಮಂಜು(17) ಮೃತ ಯುವಕ. ಬಳ್ಳೆ ಹಾಡಿಯ ಮಂಜು ಎಂದಿನಂತೆಯೇ ಸೌದೆ ತರಲು ಕಾಡಿಗೆ ತೆರಳಿದ್ದಾಗ ಹುಲಿ ಏಕಾಏಕಿ ನಡೆಸಿದ ದಾಳಿಯಿಂದ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

 ಘಟನೆ ಸಂಬಂಧ ಅರಣ್ಯ ಇಲಾಖೆ ವಿರುದ್ಧ ಮೃತನ ಸಂಬಂಧಿಕರು ಪ್ರತಿಭಟನೆ ನಡೆಸಿದರು. ಡಿ.ಬಿ.ಕುಪ್ಪೆ ಅರಣ್ಯ ಇಲಾಖೆಯ ಎದುರು ಡಿ.ಬಿ.ಕುಪ್ಪೆ ಮತ್ತು ಎನ್.ಬೆಳತ್ತೂರು ಗ್ರಾಮ ಪಂಚಾಯಿತಿಯ ಸದಸ್ಯರಾದ ಶಿವಕುಮಾರ್, ರಮೇಶ್, ಪುಟ್ಟಣ್ಣ, ಸುಬ್ರಮಣ್ಯ ಹಾಗೂ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ಮಾಸ್ತಯ್ಯ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

- Advertisement -

ಈ ವಿಷಯ ತಿಳಿದ ಮೇಟಿಕುಪ್ಪೆ ವಲಯದ ಎಸಿಎಫ್ ರಂಗಸ್ವಾಮಿಯವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಮನವೊಲಿಸಿದರು. ಬಳಿಕ ಪ್ರತಿಭಟನೆಯನ್ನು ಕೈಬಿಟ್ಟ ಮೃತನ ಸಂಬಂಧಿಕರು ಮೃತದೇಹದ ಮರಣೋತ್ತರ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟರು.

ಇದೇ ವೇಳೆ ಮಾತನಾಡಿದ ಎಸಿಎಫ್ ರಂಗಸ್ವಾಮಿರವರು, ಬಳ್ಳೆಯ ಹಾಡಿಯ ಸಮೀಪವೇ ಯುವಕ ಸೌದೆಯನ್ನು ಸಂಗ್ರಹಿಸುವಾಗ ಈ ಘಟನೆ ನಡೆದಿದೆ. ಮೃತನ ಕುಟುಂಬಕ್ಕೆ ಸರ್ಕಾರದಿಂದ ಬರುವ 15 ಲಕ್ಷ ರೂ ಪರಿಹಾರ ಒದಗಿಸಿಕೊಡಲಾಗುವುದು. ಈಗ ಪರಿಹಾರದಲ್ಲಿನ 2 ಲಕ್ಷದ 50 ಸಾವಿರದ ಪರಿಹಾರದ ಚೆಕ್ ನೀಡಲಾಗಿದೆ ಎಂದು ಹೇಳಿದರು.

ಕುಟುಂಬಕ್ಕೆ ಮಾಹಿತಿ ನೀಡದೆ ಮೃತ ದೇಹವನ್ನು ಅರಣ್ಯ ಇಲಾಖೆಯವರು ಸ್ಥಳಾಂತರಗೊಳಿಸಿದ್ದರು. ಅಲ್ಲದೇ ಈ ಸಂಬಂಧ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷರು ಬೇಡ ಎಂದರೂ ಮೃತದೇಹದ ರವಾನೆಯಾಗಿದೆ. ಆದ್ದರಿಂದ ಈಗ ಕೂಡಲೇ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಒದಗಿಸಬೇಕು ಎಂದು ಗ್ರಾಮಪಂಚಾಯಿತಿ ಸದಸ್ಯ ಶಿವಕುಮಾರ್ ಒತ್ತಾಯಿಸಿದ್ದಾರೆ.



Join Whatsapp