ಅರ್ಧದಲ್ಲೇ ಶಾಲೆ ಬಿಟ್ಟು ಹೆಲಿಕಾಪ್ಟರ್ ತಯಾರಿಸಿದ ಸಾಹಸಿ ಯುವಕ; ಪರೀಕ್ಷೆಯ ವೇಳೆ ದುರಂತಮಯ ಸಾವು

Prasthutha|

ಯಾವತ್ ಮಲ್ (ಮಹಾರಾಷ್ಟ್ರ): ಅರ್ಧದಲ್ಲೇ ಶಾಲೆ ಬಿಟ್ಟು ವೆಲ್ಡಿಂಗ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಉತ್ಸಾಹಿ ಯುವಕನೋರ್ವ ಗುಜರಿ ವಸ್ತುಗಳಿಂದ ಹೆಲಿಕಾಪ್ಟರ್ ತಯಾರಿಸಿ ಅದರ ಪರೀಕ್ಷೆಯ ವೇಳೆ ರೆಕ್ಕೆ ತಗುಲಿ ಮೃತಪಟ್ಟಿರುವ ದಾರುಣ ಘಟನೆ ಮಹಾರಾಷ್ಟ್ರದ ಮಹಗಾಂವ್ ಜಿಲ್ಲೆಯಲ್ಲಿ ನಡೆದಿದೆ.

- Advertisement -


ಶೇಖ್ ಇಸ್ಮಾಯಿಲ್ ಶೇಖ್ ಇಬ್ರಾಹಿಂ ಎಂಬ 24ರ ಯುವಕ 8ನೇ ತರಗತಿಯಲ್ಲೇ ಶಾಲೆ ಬಿಟ್ಟಿದ್ದ. ಆದರೆ ತಾಂತ್ರಿಕತೆಯ ಬಗೆಗೆ ತೀವ್ರ ಆಸಕ್ತಿ ಹೊಂದಿದ್ದ. ಈತನು ತಾನೇ ಒಂದು ಹೆಲಿಕಾಪ್ಟರ್ ತಯಾರಿಸಿ ಅದನ್ನು ಪರಿಶೀಲಿಸುವಾಗ ಅದರ ತಿರುಗು ರೆಕ್ಕೆ ಆತನ ಗಂಟಲು ಕತ್ತರಿಸಿ ದುರಂತ ಸಾವಿಗೀಡಾಗಿದ್ದಾನೆ.


ಮಹಾಗಾಂವ್ ತೆಹಶಿಲ್ ನ ಫುಲ್ಸ್ ವಾಂಗಿ ಊರಿನಲ್ಲಿ ಈ ಘಟನೆ ನಡೆದಿದೆ. ಅಣ್ಣ ಮುಸಾವರನ ವೆಲ್ಡಿಂಗ್ ಅಂಗಡಿಯಲ್ಲಿ ಕೆಲಸ ಮಾಡುವ ಶೇಖ್ ಇಬ್ರಾಹಿಂ, ಆಲ್ಮೆರಾ, ಕೂಲರ್ ಮೊದಲಾದ ಮನೆ ವಸ್ತುಗಳನ್ನು ತಯಾರಿಸುವಲ್ಲಿ ಹಾಗೂ ರಿಪೇರಿ ಮಾಡುವಲ್ಲಿ ತಜ್ಞನಾಗಿದ್ದ. ಉಕ್ಕು ಮತ್ತು ಅಲ್ಯುಮಿನಿಯಂ ತಗಡುಗಳಿಂದ ಏನನ್ನಾದರೂ ಮಾಡುವ ಪರಿಣತಿ ಪಡೆದಿದ್ದ. ತನ್ನ ಊರಿನ ಹೆಸರು ಜಗತ್ರ್ಪಸಿದ್ಧಿ ಪಡೆಯಲು ತಾನು ಏನಾದರೂ ಮಾಡಬೇಕು ಎಂಬುದು ಆತನ ಬಯಕೆಯಾಗಿತ್ತು.

- Advertisement -

ಯೂಟ್ಯೂಬ್ ವೀಡಿಯೋ ನೋಡಿ ಹೆಲಿಕಾಪ್ಟರ್ ಮಾಡುವ ಬಗ್ಗೆ ಶೇಖ್ ಇಬ್ರಾಹಿಂ ಯೋಚಿಸಿದ. ಅದಕ್ಕೆ ಬೇಕಾದ ವಸ್ತುಗಳನ್ನು ಒಗ್ಗೂಡಿಸಲು ಎರಡು ವರ್ಷಗಳನ್ನು ತೆಗೆದುಕೊಂಡ. ಕೊನೆಗೆ ಶೀಟ್ ಮತ್ತು ಪೈಪ್ ಗಳನ್ನು ವೆಲ್ಡ್ ಮಾಡಿ ಒಂದು ಹೆಲಿಕಾಪ್ಟರ್ ರೂಪಿಸಿ ಅದಕ್ಕೆ ಮಾರುತಿ 800ರ ಎಂಜಿನ್ ಅಳವಡಿಸಿಕೊಂಡ.

ಎಲ್ಲ ಸರಿಯಾಗಿತ್ತು, ಅದರ ಪರೀಕ್ಷೆ ವೇಳೆ ಎಚ್ಚರಿಕೆ ವಹಿಸದ್ದರಿಂದ ಅದರ ತಿರುಗು ಬ್ಲೇಡ್ ಆತನ ಕುತ್ತಿಗೆಗೆ ತಗುಲಿ ಆತ ಅಸು ನೀಗಿದ ಎಂದು ಆತನ ಮಿತ್ರ ಹರೀಶ್ ಉಬಾನೆ ತಿಳಿಸಿದ್ದಾರೆ.
ಈ ಸಾವು ಕಾಳ್ಗಿಚ್ಚಿನಂತೆ ಎಲ್ಲಾ ಕಡೆ ಹರಡಿತು. ಉಮರ್ ಖೇಡ್ ಮಾಜಿ ಶಾಸಕ ರಾಜೇಂದ್ರ ನಜಾರ್ದನೆ ಸಹಿತ ಹಲವರು ಇಲ್ಲಿಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು. ಪೊಲೀಸರು ಹೆಲಿಕಾಪ್ಟರ್ ವಶಕ್ಕೆ ತೆಗೆದುಕೊಂಡು, ಶೇಖ್ ಇಬ್ರಾಹಿಂನ ಅಣ್ಣ ಮತ್ತು ಮೂವರು ಸ್ನೇಹಿತರನ್ನು ಠಾಣೆಗೆ ಕರೆಸಿ ಹೇಳಿಕೆ ಪಡೆದುಕೊಂಡರು. ಕೇಸು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Join Whatsapp