ಕುಂದಾಪುರ: ಕೊಡಲಿಯಿಂದ ಕೊಚ್ಚಿ ಮಗನಿಂದಲೇ ತಂದೆಯ ಕೊಲೆ

Prasthutha|

ಕುಂದಾಪುರ: ಕೊಡಲಿಯಿಂದ ಕೊಚ್ಚಿ ವ್ಯಕ್ತಿಯೋರ್ವ ತನ್ನ ಸ್ವಂತ ತಂದೆಯನ್ನು ಕೊಲೆಗೈದ ಘಟನೆ ಕೋಟೇಶ್ವರ ಸಮೀಪದ ಗೋಪಾಡಿ ಎಂಬಲ್ಲಿ ನಡೆದಿದೆ.

- Advertisement -

ಶನಿವಾರ ರಾತ್ರಿ 10:45ರ ಸುಮಾರಿಗೆ ಘಟನೆ ನಡೆದಿದ್ದು, ಗೋಪಾಡಿ ಗ್ರಾಮದ ಹಾಲಾಡಿ ಮನೆ ನಿವಾಸಿ 74 ವರ್ಷದ ನರಸಿಂಹ ಮರಕಾಲ ಕೊಲೆಯಾದ ವ್ಯಕ್ತಿ.

ಅವರ ಪುತ್ರ 36 ವರ್ಷದ ರಾಘವೇಂದ್ರ ತೋಳಾರ್ ಕೊಲೆ ಆರೋಪಿಯಾಗಿದ್ದು, ಆತನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

- Advertisement -

ಜಾಗದ ವಿಚಾರವಾಗಿ ತಂದೆ-ಮಗನ ನಡುವೆ 9 ವರ್ಷಗಳಿಂದ ತಕರಾರಿದ್ದು, ಈ ವಿಚಾರವಾಗಿ ಇವರೊಳಗೆ ಆಗಾಗ್ಗೆ ಜಗಳ ಆಗುತ್ತಿತ್ತು ಎನ್ನಲಾಗಿದೆ. ಅದೇ ರೀತಿ ಕಳೆದ ರಾತ್ರಿ ಕ್ಷುಲ್ಲಕ ವಿಚಾರಕ್ಕೆ ಇವರೊಳಗೆ ಜಗಳವಾಗಿದ್ದು, ಈ ವೇಳೆ ಆರೋಪಿ ರಾಘವೇಂದ್ರ ಕೊಡಲಿಯಿಂದ ತಂದೆಯ ತಲೆ, ಮುಖಕ್ಕೆ ಮಾರಣಾಂತಿಕವಾಗಿ ದಾಳಿ ನಡೆಸಿದ್ದಾನೆ.

ಈ ವೇಳೆ ದಾಳಿ ತಪ್ಪಿಸಲೆತ್ನಿಸಿದ ನರಸಿಂಹರ ಪುತ್ರಿ ಸುಜಾತಾ ಹಾಗೂ ಅವರ ಪತಿ ಮೇಲೂ ಆರೋಪಿ ಕೊಡಲಿ ಬೀಸಿದ್ದಾನೆ. ಇದರಿಂದ ಅವರಿಬ್ಬರಿಗೂ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ಧಾರೆ.

ಗಂಭೀರ ಗಾಯಗೊಂಡಿದ್ದ ನರಸಿಂಹ ಮರಕಾಲ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ರಾತ್ರಿ 11 ಗಂಟೆ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕುಂದಾಪುರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Join Whatsapp