ಬದಲಾವಣೆಯ ಪರ್ವ ಕಾಲ

Prasthutha|

►ಎಫ್. ನುಸೈಬಾ, ಕಲ್ಲಡ್ಕ

- Advertisement -

ಪವಿತ್ರ ರಮಝಾನಿನ ದಿನ-ರಾತ್ರಿಗಳಲ್ಲಿ ನಾವು ಹೆಜ್ಜೆ ಹಾಕುತ್ತಿದ್ದೇವೆ. ಸಾಲು ಸಾಲು ಪುಣ್ಯಗಳ ಕೊಯ್ಲು ಕಾಲ ರಮಝಾನ್. ವರ್ಷವಿಡೀ ಮಾಡಿದ ಪಾಪಗಳಿಂದ ಮಲಿನಗೊಂಡ ಹೃದಯವನ್ನು ಪವಿತ್ರಗೊಳಿಸಲು ಒಂದು ಸುಂದರ ಅವಕಾಶ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡವರೇ ಭಾಗ್ಯವಂತರು. ಈ ಬಾರಿಯ ರಮಝಾನ್’ನ ಅರ್ಧಭಾಗ ಮುಗಿದು ಹೋಗಿದೆ. ಕಳೆದು ಹೋದ ದಿನಗಳಿಗೊಮ್ಮೆ ಕಣ್ಣೋಡಿಸಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಆ ದಿನಗಳನ್ನು ನಾವೆಷ್ಟು ಪ್ರಯೋಜನಕಾರಿಯಾಗಿ ಬಳಸಿಕೊಂಡಿದ್ದೇವೆ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳೋಣ.

ಬಹುಶಃ ಉತ್ತರ ನಮಗೆ ತೃಪ್ತಿಯಾಗದು. ಕಾರಣ ನಮ್ಮ ದಿನಗಳೆಲ್ಲವೂ ಇಫ್ತಾರಿನ ವೈವಿಧ್ಯಮಯ ಅಡುಗೆ ತಯಾರಿಯಲ್ಲಿ, ಈದ್ ದಿನಕ್ಕಾಗಿ ಬಟ್ಟೆಗಳ ಖರೀದಿಯಲ್ಲೇ ಕಳೆದುಹೋಗಿದೆ. ನಾವು ಕ್ಷುಲ್ಲಕವೆಂದು ಪರಿಗಣಿಸುವ ಆದರೆ ಅಲ್ಲಾಹನ ಮುಂದೆ ಮಹತ್ತರವೆನಿಸುವ ಅತ್ಯಮೂಲ್ಯ ಕ್ಷಣಗಳು ನಮ್ಮ ಕೈ ತಪ್ಪಿ ಹೋಗುತ್ತಿವೆ. ಇಫ್ತಾರ್ ಹಾಗೂ ಸಹರಿಯ ಸಮಯದಲ್ಲಿ ಪ್ರಾರ್ಥಿಸಿದ ಕೈಗಳನ್ನು ಅಲ್ಲಾಹನು ಬರಿಗೈಯಲ್ಲಿ ಮರಳಿಸಲಾರ. ಸಹರಿಯ ಸಮಯದಲ್ಲಿ ಅಲ್ಲಾಹನ ಅನುಗ್ರಹವು ಒಂದನೇ ಆಕಾಶಕ್ಕೆ ಬಂದಿಳಿದು ಯಾರಾದರೂ ತನ್ನಲ್ಲಿ ಯಾಚಿಸುತ್ತಿದ್ದಾರೆಯೇ ಎಂದು ನೋಡುವನೆಂದು ಹದೀಸ್ ಗಳಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ನಾವೆಷ್ಟು ಜಾಗೃತರಾಗಿದ್ದೇವೆ?. ಆಝಾನ್ ಕರೆ ಮೊಳಗುವವರೆಗೂ ನಮ್ಮ ಕೆಲಸ ಕಾರ್ಯಗಳಿಗೆ ಬ್ರೇಕ್ ಬಿದ್ದಿರುವುದಿಲ್ಲ. ಬ್ಯುಝಿ ಎಂಬ ಸಬೂಬು ನಮ್ಮನ್ನು ಆಧ್ಯಾತ್ಮಿಕತೆಯ ಅನುಭೂತಿಯಿಂದ ವಂಚಿತರನ್ನಾಗಿ ಮಾಡುತ್ತಿದೆ. ಮನಸ್ಸಿದ್ದರೆ ಮಾರ್ಗವಿದೆ. ಕೇವಲ ಹತ್ತು ನಿಮಿಷ ಮುಂಚಿತವಾಗಿ ನಮ್ಮೆಲ್ಲ ಕೆಲಸ ಕಾರ್ಯಗಳನ್ನು ಮುಗಿಸಿ ಇಫ್ತಾರ್ ಗಾಗಿ ಅಣಿಗೊಳಿಸಿದ ಆಹಾರದ ಮುಂದೆ ಆಸೀನರಾಗಿ ನಮ್ಮೆಲ್ಲ ಬೇಡಿಕೆಗಳನ್ನು ಅಲ್ಲಾಹನ ಮುಂದೆ ತೆರೆದಿಟ್ಟು ಮನತುಂಬಿ ಪ್ರಾರ್ಥಿಸಬೇಕು. ಅದೇ ರೀತಿ ಸಹರಿಯಲ್ಲೂ ಮಾತುಕತೆಗಳಿಗೆ ಕಡಿವಾಣ ಹಾಕಿ ಅಲ್ಲಾಹನ ಮುಂದೆ ಏಕಾಂತರಾಗಬೇಕು. ಹಸಿವಿನ ಕ್ರೂರತೆಯನ್ನು ಅರ್ಥೈಸಿಕೊಳ್ಳಬೇಕಾದ ದಿನಗಳಲ್ಲಿ ಆಹಾರ ಖಾದ್ಯಗಳದ್ದೇ ದರ್ಬಾರು. ದಿನಂಪ್ರತಿ ವಿಭಿನ್ನ ತಿಂಡಿಗಳಿಗಾಗಿ ಬೇಡಿಕೆ. ಹೊಸ ಹೊಸ ಆವಿಷ್ಕಾರಕ್ಕಾಗಿ ಯೂಟ್ಯೂಬ್ ಮೊರೆ ಹೋಗುವ ಮಹಿಳೆಯರು ಅದರಲ್ಲೇ ಸಮಯ ವ್ಯಯಿಸುತ್ತಾರೆ. ಹಲವರಿಗಂತೂ ಇದು ಪ್ರತಿಷ್ಠೆಯ ಸಂಕೇತ. ರಮಝಾನಿನ ಉಪವಾಸವು ಆರೋಗ್ಯಕ್ಕೆ ಪೂರಕ ಎಂದು ಆಧುನಿಕ ವಿಜ್ಞಾನವು ಸಾಬೀತುಪಡಿಸಿದೆ. ಆದರೆ ನಮ್ಮ ಇಫ್ತಾರಿನ ವಿಶೇಷ, ವಿಭಿನ್ನ ರುಚಿಯ ಕರಿದ ತಿಂಡಿಗಳು, ಸಕ್ಕರೆ ತುಂಬಿದ ಪಾನೀಯಗಳು ಆರೋಗ್ಯವನ್ನು ಮತ್ತಷ್ಟು ಹದಗೆಡಿಸುತ್ತಿದೆ. ಒಂದಿಬ್ಬರಿಂದ ಇದರ ನಿಯಂತ್ರಣ ಅಸಾಧ್ಯ. ಮನೆಯವರೆಲ್ಲ ಒಮ್ಮತದ ಅಭಿಪ್ರಾಯಕ್ಕೆ ಬಂದು ಮಿತಿಮೀರಿದ ಭಕ್ಷ್ಯ ಭೋಜನಗಳಿಗೆ ವಿರಾಮ ಹಾಕಿ ಆರೋಗ್ಯವನ್ನು ಕಾಪಿಟ್ಟುಕೊಳ್ಳುವುದು ಒಳಿತು.

- Advertisement -


ಇನ್ನು, ರಮಝಾನಿನಲ್ಲಿ ದಾರಿದ್ರ್ಯಕ್ಕೆ ಹೇತುವಾಗುವ, ಸಮೃದ್ಧಿ-ಬರಕತ್ತನ್ನು ಇಲ್ಲವಾಗಿಸುವ ಪ್ರಮುಖ ಅಂಶ ಸೂರ್ಯೋದಯಕ್ಕೂ ಮುಂಚಿನ ನಿದ್ದೆ. ಪ್ರಭಾತದ ಸಮಯವು ಅಲ್ಲಾಹನು ರಿಝ್ಕ ಅನ್ನು ವಿತರಿಸುವ ಸಮಯವೆಂದು ತಿಳಿಯಲಾಗುತ್ತದೆ. ಈ ಸಮಯದ ನಿದ್ದೆಯನ್ನು ಕಟುವಾಗಿ ವಿರೋಧಿಸಲಾಗಿದೆ. ಈ ಸಂದರ್ಭದಲ್ಲೂ ನಾವು ನಿದ್ದೆಗೆ ಶರಣಾಗಿ ಮನೆಯ ಸಮೃದ್ಧಿಯನ್ನು ನಷ್ಟಪಡಿಸುತ್ತಿದ್ದೇವೆ. ದಣಿವು ಆಯಾಸವನ್ನು ಬದಿಗೊತ್ತಿ ಸಿಗುವ ಸಮಯದಲ್ಲಿ ವ್ಯರ್ಥ ಕಾಲಹರಣ ಮಾಡದೆ, ಅನಗತ್ಯ ಮಾತುಕತೆಗೆ ಅವಕಾಶ ಕೊಡದೆ ಖುರ್’ಆನ್ ಪಾರಾಯಣದಲ್ಲಿ ತೊಡಗಿಸಿಕೊಂಡರೆ ಕನಿಷ್ಠ ಎರಡು ಖತಂ ಆದರೂ ಪೂರ್ಣಗೊಳಿಸುವುದು ಪ್ರಯಾಸವೇನಲ್ಲ.
ಸರಳತೆಯನ್ನೇ ಉಸಿರಾಗಿಸಿದ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಅನುಯಾಯಿಗಳು ನಾವು. ಆ ಸರಳತೆಯನ್ನು ಮೈಗೂಡಿಸಿಕೊಳ್ಳಲು ರಮಝಾನ್ ಒಂದು ತರಬೇತಿಯ ಮಾಸ. ಆಡಂಬರದ ಆಹಾರ, ವಸ್ತ್ರ ವಿಧಾನಗಳಿಂದ ಸರಳತೆಗೆ ಒಗ್ಗಿಕೊಳ್ಳುವ ಜೀವನ ಶೈಲಿ ನಮ್ಮದಾಗಬೇಕು. ದಾನ ಧರ್ಮವನ್ನು ಹೆಚ್ಚಿಸುವ ಮೂಲಕ ಆತ್ಮ ಶುದ್ಧೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕಡ್ಡಾಯ ಝಕಾತನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಿಸದೆ ಅದಕ್ಕೆ ಅರ್ಹನಾದವನಿಗೆ ಒಪ್ಪಿಸುವ ಮೂಲಕ ನಮ್ಮ ಪಾರತ್ರಿಕ ಬದುಕನ್ನು ಭದ್ರವಾಗಿರಿಸಲು ಯತ್ನಿಸಬೇಕು. ಪಾಪ ವಿಮೋಚನೆಗಾಗಿ ಸದಾ ಸಮಯ ಏಕ ಇಲಾಹನ ಮುಂದೆ ಏಕಾಂತರಾಗಬೇಕು.


ಅಲ್ಲಾಹನೊಂದಿಗೆ ನೇರವಾಗಿ ಸಂಭಾಷಣೆ ನಡೆಸಿದ ಪ್ರವಾದಿಯಾಗಿದ್ದಾರೆ ಮೂಸ ನೆಬಿ ಅಲೈಹಿಸ್ಸಲಾಂ. ಆ ಸಂದರ್ಭದಲ್ಲಿ ಮೂಸ ನೆಬಿ ಅಲೈಹಿಸ್ಸಲಾಂ ಅಲ್ಲಾಹನೊಂದಿಗೆ ಕೇಳುತ್ತಾರೆ, ‘ನಾನಲ್ಲದೆ ನಿನ್ನೊಂದಿಗೆ ನೇರವಾಗಿ ಭೇಟಿಯಾದವರು ಯಾರೂ ಇಲ್ಲವೇ.. ನನಗಿಂತ ಶ್ರೇಷ್ಠರು ಯಾರಾದರೂ ಇದ್ದಾರೆಯೇ?. ಆಗ ಅಲ್ಲಾಹನು ಈ ರೀತಿ ಹೇಳುತ್ತಾನೆ, ” ಕೊನೆಯದಾಗಿ ಒಂದು ಸಮುದಾಯದವು ಈ ಭೂಮಿಗೆ ಬರಲಿದೆ. ಅವರು ವ್ರತಾನುಷ್ಠಾನ ಮಾಡುವವರಾಗಿದ್ದಾರೆ. ನಾನು ಮತ್ತು ನೀವು ಈಗ ಮಾತನಾಡುವಾಗ ನಮ್ಮ ಮಧ್ಯೆ ಎಪ್ಪತ್ತು ಸಾವಿರ ತಡೆಗಳಿದ್ದವು. ಆದರೆ ಒಬ್ಬ ಉಪವಾಸಿಗ ನನ್ನ ಮುಂದೆ ಬಂದರೆ ಒಂದೇ ಒಂದು ತಡೆಯೂ ಇರುವುದಿಲ್ಲ”!!. ಇದಾಗಿದೆ ಉಪವಾಸದ ಮಹತ್ವ..!!


ಅಗಣಿತವಾದ ರಮಝಾನಿನ ಮಹತ್ವ ಬರಹ ಭಾಷಣಗಳ ಮೂಲಕ ವರ್ಷಂಪ್ರತಿ ಕೇಳುತ್ತಲೇ ಬರುತ್ತೇವೆ. ಆದರೆ ಮನಸ್ಸೆಂಬ ಮಾಯಾಜಾಲ ಕ್ಷಣ ಕ್ಷಣಕ್ಕೂ ಬದಲಾಗುವುದರಿಂದ ಇವುಗಳ ಪುನರಾವರ್ತನೆಯೂ ಅಗತ್ಯವೆನಿಸುತ್ತದೆ.
ಬರೆದು ಮುಗಿಸುವ ಹೊತ್ತಿಗೆ ಕಣ್ಣುಗಳು ತೇವಗೊಳ್ಳುತ್ತಿದೆ. ಕೈಗಳು ನಡುಗಲಾರಂಭಿಸಿದೆ. ಈ ಸಂದರ್ಭದಲ್ಲಿ ನಿನ್ನೆಯಷ್ಟೇ ಹಿತೈಷಿಯೊಬ್ಬರು ಹೇಳಿದ ಮಾತು ನೆನಪಾಗುತ್ತಿದೆ. ” ಇಲ್ಲಿ ಯಾರೂ ಪರಿಪೂರ್ಣರಿಲ್ಲ, ಯಾರೂ ಕನಿಷ್ಠರೂ ಅಲ್ಲ.” ಹೌದು ಉತ್ತಮ ವಿಚಾರಗಳನ್ನು ಹಂಚಿಕೊಳ್ಳುವಾಗ ನಾವೂ ಅದರೊಂದಿಗೆ ಬದಲಾವಣೆಗೊಳ್ಳಲು ಪ್ರೇರಿತರಾಗುತ್ತೇವೆ. ಆ ದೃಷ್ಟಿಯಿಂದ ಮಾತ್ರವೇ ಈ ಒಂದು ಬರಹ. ರಮಝಾನಿನ ನಂತರದ ದಿನಗಳು ಕೂಡ ಸತ್ಕರ್ಮಗಳಿಂದ ಕೂಡಿರಲಿ. ಎಂತಹ ಸಂದರ್ಭದಲ್ಲಿಯೂ ಸತ್ಯದೊಂದಿಗೆ ನೆಲೆಯೂರಲು ಸಾಧ್ಯವಾಗಲಿ ಎಂಬ ಆಶಯದೊಂದಿಗೆ…..

Join Whatsapp