ದೇವಸ್ಥಾನದಲ್ಲಿ ನೀರು ಕುಡಿದ ಮುಸ್ಲಿಂ ಬಾಲಕನ ಮೇಲೆ ಹಲ್ಲೆ ನಡೆಸಿ ವೀಡಿಯೋ ವೈರಲ್ । ಮತಾಂಧ ಶೃಂಗಿ ಯಾದವ್ ಬಂಧನ

Prasthutha|

ಉತ್ತರಪ್ರದೇಶದ ಗಾಜಿಯಾಬಾದ್‌ನ ದಾಸನ ದೇವಿ ದೇವಾಲಯದಲ್ಲಿ ನೀರು ಕುಡಿದನೆಂದು ಆರೋಪಿಸಿ ಮುಸ್ಲಿಮ್ ಬಾಲಕನೊಬ್ಬನ ಮೇಲೆ ಶೃಂಗಿ ನಂದನ್ ಯಾದವ್ ಎಂಬ ವ್ಯಕ್ತಿಯು ಕ್ರೂರವಾಗಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ನಡೆದಿದೆ. ಆರೋಪಿಯು ಹಲ್ಲೆ ನಡೆಸುವುದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದನು.

- Advertisement -

ಈ ರೀತಿಯ ಧರ್ಮರಕ್ಷಣೆಯ ಕೆಲಸಗಳಿಗಾಗಿ, ಕೇಸುಗಳ ವಿರುದ್ಧ ಹೋರಾಡುವುದಕ್ಕಾಗಿ ದೇಣಿಗೆ ನೀಡುವಂತೆ ಹಿಂದುಏಕ್ತಾಸಂಘ್ ಎಂಬ ಇನ್ಸ್ಟಗ್ರಾಮ್ ಖಾತೆಯಲ್ಲಿ ಮುಸ್ಲಿಮ್ ಬಾಲಕನಿಗೆ ಥಳಿಸುವ ವೀಡಿಯೋವನ್ನು ಅಪ್‌ಲೋಡ್ ಮಾಡಿ ಮನವಿ ಮಾಡಿದ್ದಾನೆ ಎಂದು ಹಲವು ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ.

ಪತ್ರಕರ್ತ ಮೊಹಮ್ಮದ್ ಝೂಬೈರ್ “ನೀರು ಕುಡಿದಿದ್ದಕ್ಕಾಗಿ ಮುಸ್ಲಿಮ್ ಬಾಲಕನ ಮೇಲೆ ನಿರ್ದಯವಾಗಿ ಹಲ್ಲೆ ನಡೆಸಿ ಇನ್ಸ್ಟಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಆತನನ್ನು ನಪುಂಸಕನಾಗಿ ಮಾಡಬೇಕೆಂದು ಬರೆಯಲಾಗಿದೆ. ಈತ ಈ ಹಿಂದೆಯೂ ಹಲವು ಬಾಲಕರ ಮೇಲೆ ಹಲ್ಲೆ ನಡೆಸಿರುವ ದಾಖಲೆಗಳಿವೆ. ಈ ಕುರಿತು ಗಾಜಿಯಾಬಾದ್ ಪೊಲೀಸರು ಕ್ರಮ ತೆಗೆದುಕೊಳ್ಳಬೇಕೆಂದು” ಒತ್ತಾಯಿಸಿದ್ದಾರೆ.

- Advertisement -

ಬಾಲಕನ ಬಳಿ ಆರೋಪಿ ಶೃಂಗಿ ನಂದನ್ ಯಾದವ್ ಹೆಸರನ್ನು ಕೇಳುತ್ತಿರುವುದು ವೈರಲ್ ಆದ ವೀಡಿಯೋದಲ್ಲಿ ಕಂಡುಬಂದಿದೆ. ಅದಕ್ಕೆ ಬಾಲಕ  ಹೆಸರು ಆಸಿಫ್ ತಾನು ನೀರು ಕುಡಿಯಲು ದೇವಾಸ್ಥಾನಕ್ಕೆ ಹೋಗಿದ್ದೆ ಎಂದು ಉತ್ತರಿಸಿದ್ದಾನೆ. ಇದರಿಂದ ಕುಪಿತಗೊಂಡ ಆರೋಪಿ ಬಾಲಕನಿಗೆ ಅಮಾನು‍ಷವಾಗಿ ಥಳಿಸಿದ್ದಾನೆ, ಕಾಲಿನಲ್ಲಿ ಒದ್ದು ಕೈಮುರಿಯಲು ಯತ್ನಿಸಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

ಬಾಲಕನಿಗೆ ಥಳಿಸುವ ವೀಡಿಯೋ ವೈರಲ್ ಆಗುತ್ತಿದ್ದಂತೆ ಆರೋಪಿ ಶೃಂಗಿ ಯಾದವ್‌ನನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ. ಶೃಂಗಿ ನಂದನ್ ಯಾದವ್ ಬಿಹಾರದ ಭಾಗಲ್ಪುರ ನಿವಾಸಿಯಾಗಿದ್ದು ಪೊಲೀಸರು ಯಾದವ್‌ನನ್ನು ವಶಕ್ಕೆ ಪಡೆದು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ಶೃಂಗಿ ಯಾದವ್‌ ಕೆಲದಿನಗಳ ಹಿಂದೆ ಮತ್ತೊಬ್ಬ ಮುಸ್ಲಿಮ್ ಬಾಲಕನಿಗೆ ಹಲ್ಲೆ ನಡೆಸಿ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಎಂದು ಹಲವರು ವೀಡಿಯೋ ಷೇರ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.



Join Whatsapp