‘ರಾಜಿ ಇಲ್ಲದ ರಾಜಶೇಖರ್’ಗೆ ಭಾವಪೂರ್ಣ ವಿದಾಯ….

Prasthutha|

ಉಡುಪಿ: ನಿನ್ನೆ ರಾತ್ರಿ ನಿಧನರಾದ ಚಿಂತಕ, ವಿಮರ್ಶಕ ಜಿ.ರಾಜಶೇಖರ್ (75)ರವರ ಅಂತ್ಯಕ್ರಿಯೆಯನ್ನು ಇಂದು ಮಧ್ಯಾಹ್ನ ಉಡುಪಿಯ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.

- Advertisement -


ಉಡುಪಿಯ ಕರ್ಕಡ ಕಂಪೌಂಡ್ ನಲ್ಲಿರುವ ಜಿ.ರಾಜಶೇಖರ್ ಪತ್ನಿಯ ತಂಗಿ ಕೆ.ಸುಲೋಚನಾ ಭಟ್ ಅವರ ಮನೆಯಲ್ಲಿ ಬೆಳಗ್ಗೆ 8:30ರಿಂದ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ನೂರಾರು ಗಣ್ಯರು, ಅಭಿಮಾನಿಗಳು, ಬಂಧುಗಳು, ಸಾರ್ವಜನಿಕರು ಪಡೆದರು. ಬಳಿಕ ಮಧ್ಯಾಹ್ನ 12 ಗಂಟೆಗೆ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.


2019ರಿಂದ ಪ್ರೊಗ್ರೆಸಿವ್ ಸುಪ್ರನ್ ನ್ಯೂಕ್ಲಿಯರ್ ಪಾಲ್ಸಿ(ಪಾರ್ಕಿಂಸನ್ ಪ್ಲಸ್) ಎಂಬ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು.
ನಾಡಿನ ಹಿರಿಯ ಸಾಕ್ಷಿ ಪ್ರಜ್ಞೆಯಂತಿದ್ದ ರಾಜಶೇಖರ್ ನಾಡಿನ ಸೌಹಾರ್ದತೆಗಾಗಿ ಜೀವಮಾನವಿಡೀ ಶ್ರಮಿಸಿ, ಫ್ಯಾಶಿಸ್ಟ್ ಶಕ್ತಿಯ ವಿರುದ್ಧ ಹೋರಾಡಿದವರು. ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ರಾಜಶೇಖರ್ ಅವರು ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ಅಸ್ವಸ್ಥರಾಗಿ ಪ್ರಜ್ಞೆ ಕಳೆದುಕೊಂಡ ಅವರನ್ನು ನಾಲ್ಕೈದು ದಿನಗಳ ಹಿಂದೆಯಷ್ಟೇ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಕೃತಕ ಉಸಿರಾಟ ವ್ಯವಸ್ಥೆ ಅಳವಡಿಸಲಾಗಿತ್ತು. ಚಿಕಿತ್ಸೆ ಫಲಿಸದೆ ನಿನ್ನೆ ಅವರು ನಿಧನರಾಗಿದ್ದಾರೆ.
1946, ಎಪ್ರಿಲ್ 3ರಂದು ಉಡುಪಿಯಲ್ಲಿ ಜನಿಸಿದ ರಾಜಶೇಖರ್, ಉಡುಪಿಯಲ್ಲಿ ಪದವಿವರೆಗಿನ ವಿದ್ಯಾಭ್ಯಾಸ ಪಡೆದು ಕೆಲ ಕಾಲ ಶಿಕ್ಷಕರಾಗಿದ್ದರು. ಬಳಿಕ ಎಲ್ ಐಸಿಯಲ್ಲಿ ಸೇವೆಗೆ ಸೇರಿದರು.

- Advertisement -


ಜಿ. ರಾಜಶೇಖರ ಸಾಹಿತ್ಯ-ಸಮಾಜ-ರಾಜಕಾರಣ, ಕೋಮುವಾದವೂ ಸೇರಿದಂತೆ ಸಮಕಾಲೀನ ವಿದ್ಯಮಾನಗಳ ಬಗ್ಗೆ ನಿರಂತರವಾಗಿ ಬರೆದಿದ್ದಾರೆ.
ಸಮಕಾಲೀನ ಕನ್ನಡದ ಪ್ರಮುಖ ವಿಮರ್ಶಕ- ಚಿಂತಕರೆಂದು ಮನ್ನಣೆ ಗಳಿಸಿರುವ ರಾಜಶೇಖರ್ ಅವರು ಎಡಪಂಥೀಯ ಧೋರಣೆಯನ್ನು ನಿಷ್ಠುರ ಆತ್ಮವಿಮರ್ಶೆಯೊಂದಿಗೆ ಕಸಿ ಮಾಡಿದವರು. ಕಾಗೋಡು ಸತ್ಯಾಗ್ರಹ, ಪರಿಸರ ಮತ್ತು ಸಮಾಜವಾದ, ಬರ್ಟೊಲ್ಟ್ ಬ್ರೆಕ್ಟ್ ಪರಿಚಯ, ದಾರು ಪ್ರತಿಮ ನ ಪೂಜಿವೇ (ಅನುವಾದ), ಕೋಮುವಾದದ ಕರಾಳ ಮುಖಗಳು, ಹರ್ಷಮಂದರ್ ಬರಹಗಳು (ಸಹಲೇಖಕ: ಕೆ. ಫಣಿರಾಜ್), ಬಹುವಚನ ಭಾರತ ಮಂತಾದವು ಅವರ ಪ್ರಕಟಿತ ಕೃತಿಗಳಲ್ಲಿ ಸೇರಿವೆ. ಜಿ.ರಾಜಶೇಖರ್ ಅವರು ಬರೆದ “ಬಹುವಚನ ಭಾರತ” ಕೃತಿ 2015ನೇ ಸಾಲಿನ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಗೆ ಆಯ್ಕೆಯಾಗಿತ್ತು. ಆದರೆ ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ ಎಂದು ಹೇಳಿ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿ ದಿಟ್ಟತನ ಪ್ರದರ್ಶಿಸಿದ್ದರು.
“ಪ್ರಸ್ತುತ” ಪತ್ರಿಕೆಯ ಬಗ್ಗೆಯೂ ಅತೀವ ಕಾಳಜಿ ಹೊಂದಿದ್ದ ಜಿ.ರಾಜಶೇಖರ್ ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಸಮಕಾಲೀನ ವಿಚಾರಗಳ ಬಗ್ಗೆ ಪತ್ರಿಕೆಗೆ ಲೇಖನಗಳನ್ನು ಕಳುಹಿಸಿಕೊಡುತ್ತಿದ್ದರು. ಮಾತ್ರವಲ್ಲ, ಪತ್ರಿಕೆ ನೀಡುವ ಗೌರವ ಧನವನ್ನು ಅವರು ನಯವಾಗಿಯೇ ತಿರಸ್ಕರಿಸುತ್ತಿದ್ದರು.


“ಕೆಎಂ ಶರೀಫ್ ಸ್ಮಾರಕ ಪ್ರಶಸ್ತಿ-2021” ಸ್ವೀಕರಿಸಿದ್ದ ಜಿ.ರಾಜಶೇಖರ್
ಹಿರಿಯ ಪತ್ರಕರ್ತ, ಚಿಂತಕ ಹಾಗೂ ಪ್ರಸ್ತುತ ಪಾಕ್ಷಿಕದ ಪ್ರಥಮ ಪ್ರಧಾನ ಸಂಪಾದಕರಾಗಿದ್ದ ಕೆ.ಎಂ.ಶರೀಫ್ ಅವರ ಸ್ಮರಣಾರ್ಥ ಪ್ರಪ್ರಥಮ ಬಾರಿಗೆ ಕೊಡಮಾಡಿದ “ಕೆ.ಎಂ. ಶರೀಫ್ ಸ್ಮಾರಕ ಪ್ರಶಸ್ತಿ-2021”ಗೆ ಜಿ.ರಾಜಶೇಖರ್ ಭಾಜನರಾಗಿದ್ದರು. ತೀವ್ರ ಅನಾರೋಗ್ಯದ ನಡುವೆಯೂ, ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುತ್ರ ವಿಷ್ಣು ಅವರ ನೆರವಿನೊಂದಿಗೆ ಖುದ್ದು ಭಾಗಿಯಾಗಿ ಜಿ ಪ್ರಶಸ್ತಿ ಸ್ವೀಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದು ಪ್ರಸ್ತುತ ಪತ್ರಿಕೆಯೊಂದಿಗೆ ಅವರಿಗಿದ್ದ ಪ್ರೀತಿ, ಕಾಳಜಿಗೆ ಒಂದು ನಿದರ್ಶನವಾಗಿದೆ.


ಮೃತರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

Join Whatsapp