ಕುಂಭಮೇಳದಲ್ಲಿ ನಕಲಿ ಕೋವಿಡ್ ಪರೀಕ್ಷೆ | ಹಗರಣಕೋರರಿಗೆ ಬಿಜೆಪಿ ನಾಯಕರೊಂದಿಗೆ ನಿಕಟ ಸಂಬಂಧ!

Prasthutha: June 24, 2021

ಮುಂಬೈ: ಉತ್ತರಾಖಂಡದ ಹರಿದ್ವಾರದಲ್ಲಿ ಕುಂಭಮೇಳದಲ್ಲಿ ಭಾಗವಹಿಸಿದವರ ನಕಲಿ ಕೋವಿಡ್ ಪರೀಕ್ಷೆ ನಡೆಸಿದ ಆರೋಪದ ಮೇಲೆ ತನಿಖೆಯಲ್ಲಿರುವ ಕಂಪೆನಿ ಮಾಲೀಕರು ಬಿಜೆಪಿಯ ಉನ್ನತ ನಾಯಕರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ.

ನೋಯ್ಡಾ ಮೂಲದ ಮ್ಯಾಕ್ಸ್ ಕಾರ್ಪೊರೇಟ್ ಸರ್ವೀಸಸ್ 98,000 ನಕಲಿ ಕೋವಿಡ್ ಪರೀಕ್ಷೆಗಳನ್ನು ನಡೆಸಿರುವ ಬಗ್ಗೆ ತನಿಖೆಯನ್ನು ಎದುರಿಸುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಮ್ಯಾಕ್ಸ್ ಕಂಪೆನಿ ವಿರುದ್ಧ ಹರಿದ್ವಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ನಡುವೆ ಕಂಪೆನಿಯ ಮಾಲೀಕರು ಬಿಜೆಪಿಯ ಹಿರಿಯ ನಾಯಕರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಎಂಬುದನ್ನು ತೋರಿಸುವ ಚಿತ್ರಗಳನ್ನು ‘ದಿ ವೈರ್’ ಬಿಡುಗಡೆ ಮಾಡಿದೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರೊಂದಿಗೆ ಶರತ್ ಪಂತ್

ಕಂಪೆನಿಯ ಸ್ಥಾಪಕ ನಿರ್ದೇಶಕರಲ್ಲಿ ಒಬ್ಬರಾದ ಶರತ್ ಪಂತ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಮೋದಿ ಸಂಪುಟದ ಪ್ರಮುಖ ಸಚಿವರಾದ ಸ್ಮೃತಿ ಇರಾನಿ ಮತ್ತು ನರೇಂದ್ರ ಸಿಂಗ್ ತೋಮರ್ ಅವರೊಂದಿಗೆ ನಿಕಟ ಸಂಬಂಧ ವನ್ನು ಹೊಂದಿದ್ದಾರೆ. ಬಿಜೆಪಿ ನಾಯಕರೊಂದಿಗಿನ ಈ ಸಂಬಂಧವನ್ನು ಬಳಸಿಕೊಂಡು ಕುಂಭಮೇಳದಲ್ಲಿ ಭಾಗವಹಿಸುವ ಲಕ್ಷಾಂತರ ಜನರ ಕೋವಿಡ್ ತಪಾಸಣೆಯನ್ನು ಕಂಪೆನಿಯು ನಕಲಿಯಾಗಿ ನಡೆಸಿದೆ ಎಂದು ವರದಿ ಹೇಳುತ್ತದೆ.

ಕಂಪೆನಿ ಸ್ಥಾಪಕ ನಿರ್ದೇಶಕರಾದ ಶರತ್ ಪಂತ್ ಮತ್ತು ಮಲ್ಲಿಕಾ ಪಂತ್ ಅವರ ಕುಟುಂಬವೂ ಬಿಜೆಪಿ ಹಿನ್ನೆಲೆಯನ್ನು ಹೊಂದಿದೆ. ಶರತ್ ಪಂತ್ ಚಿಕ್ಕಪ್ಪ ಭೂಪೇಶ್ ಜೋಶಿ ದಿವಂಗತ ಮಾಜಿ ಕೇಂದ್ರ ಸಚಿವ ಅನಂತ ಕುಮಾರ್ ಅವರ ಆಪ್ತ ಸಹಾಯಕರಾಗಿದ್ದರು. ಅವರು ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ, ಕೃಷಿ ಸಚಿವ ನರೇಂದ್ರ ತೋಮರ್, ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಕ್ರಿಯಾಲ್ ಅವರೊಂದಿಗೂ ನಿಕಟ ಸಂಬಂಧ ಹೊಂದಿದ್ದಾರೆ.

ಶರತ್ ಪಂತ್ ಅವರೇ ಈಗಾಗಲೇ ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಿದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಅವರು ಉತ್ತರಾಖಂಡ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅವರೊಂದಿಗೂ ನಿಕಟ ಸಂಬಂಧ ಹೊಂದಿದ್ದಾರೆ. ತೀರಥ್ ಸಿಂಗ್ ರಾವತ್ ಅವರನ್ನು ಶರತ್ ಪಂತ್ ಮತ್ತು ಮಲ್ಲಿಕಾ ಪಂತ್ ಭೇಟಿಮಾಡಿದ ಚಿತ್ರವೂ ಸಾಮಾಜಿಕ ಮಾಧ್ಯಮಗಳಲ್ಲಿದೆ. ಕುಂಭಮೇಳದ ವೇಳೆ ಕಂಪೆನಿ ನಡೆಸಿದ ಎಲ್ಲಾ 98,000 ಕೋವಿಡ್ ಪರೀಕ್ಷೆಗಳು ನಕಲಿ ಎಂದು ತನಿಖೆಯಿಂದ ತಿಳಿದುಬಂದಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ