‘ಮೇಲ್ಜಾತಿ’ ವಿದ್ಯಾರ್ಥಿಗಳ ವಿರೋಧ ಹಿನ್ನೆಲೆ: ದಲಿತ ಮಹಿಳೆಯ ನೇಮಕಾತಿ ರದ್ದು ಮಾಡಿದ ಅಧಿಕಾರಿಗಳು

Prasthutha|

ಉತ್ತಾರಾಖಂಡ: ಹಿಂದೂ ಧರ್ಮದ ‘ಮೇಲ್ಜಾತಿ’ ವಿದ್ಯಾರ್ಥಿಗಳು ಮಧ್ಯಾಹ್ನದ ಊಟವನ್ನು ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಅಡುಗೆ ಕೆಲಸಕ್ಕೆ ನೇಮಕಗೊಂಡಿದ್ದ ದಲಿತ  ಮಹಿಳೆಯನ್ನು ಕೆಲಸದಿಂದ ವಜಾಮಾಡಿರುವ ಘಟನೆ ಉತ್ತಾರಾಖಂಡ ರಾಜ್ಯದ ಚಂಪಾವತ್ ಜಿಲ್ಲೆಯಲ್ಲಿ ನಡೆದಿದೆ. ದಲಿತ ಸಮುದಾಯಕ್ಕೆ ಸೇರಿದ ಮಹಿಳೆಯು ಬಿಸಿಯೂಟವನ್ನು ಸಿದ್ಧಪಡಿಸಿದ್ದಾಳೆ ಎಂಬ ಕಾರಣವೊಡ್ಡಿ ನಿರ್ಧಿಷ್ಟ ಗುಂಪಿನ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಬಹಿಷ್ಕರಿಸಿದ ವಿಚಾರ ಕೆಲ ದಿನಗಳ ಹಿಂದೆ ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು.

- Advertisement -

ಚಂಪಾವತ್ ಜಿಲ್ಲೆಯ ಸುಖೀಧಂಗ್‌ನ  ಸರ್ಕಾರಿ ಮಾಧ್ಯಮಿಕ ಶಾಲೆಯ 6 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ತಯಾರಿಸಲು ಸುನಿತಾ ದೇವಿ ಎಂಬಾಕೆಯನ್ನು ಡಿಸೆಂಬರ್ 13ರಂದು ನೇಮಿಸಲಾಗಿತ್ತು. ಆರಂಭದ ಕೆಲ ದಿನಗಳಲ್ಲಿ ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿದ್ದರು. ಆದರೆ ನಂತರದ ದಿನಗಳಲ್ಲಿ ನಿರ್ದಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳು ಬಿಸಿಯೂಟವನ್ನು ಬಹಿಷ್ಕರಿಸುತ್ತಿದ್ದಾರೆ. ಒಟ್ಟು 57 ವಿದ್ಯಾರ್ಥಿಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 16 ಮಕ್ಕಳಷ್ಟೇ ಸದ್ಯ ಬಿಸಿಯೂಟ ಸೇವಿಸುತ್ತಿದ್ದಾರೆ. ಉಳಿದವರು ಮನೆಯಿಂದಲೇ ಟಿಫಿನ್ ತರುತ್ತಿದ್ದಾರೆ ಎಂದು ಪ್ರಾಂಶುಪಾಲ ಪ್ರೇಮ್ ಸಿಂಗ್ ತಿಳಿಸಿದ್ದಾರೆ.  

ಇದೀಗ ಹಿಂದೂ ಧರ್ಮದ ‘ಮೇಲ್ಜಾತಿ’ ವಿದ್ಯಾರ್ಥಿಗಳ ಪೋಷಕರ ಒತ್ತಡಕ್ಕೆ ಮಣಿದಿರುವ ಅಧಿಕಾರಿಗಳು ದಲಿತ ಮಹಿಳೆ ಸುನಿತಾ ದೇವಿಯವರ ನೇಮಕಾತಿಯನ್ನು ರದ್ದು ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಚಂಪಾಚತ್ ಜಿಲ್ಲೆಯ ಮುಖ್ಯ ಶಿಕ್ಷಣಾಧಿಕಾರಿ ಆರ್‌.ಸಿ. ಪುರೋಹಿತ್,  ‘ಸುನಿತಾ ದೇವಿ ನೇಮಕದ ವೇಳೆ ನಿಯಮಗಳ ಪಾಲನೆ ಆಗಿಲ್ಲ. ಆಕೆಯ ನೇಮಕಕ್ಕೆ ಉನ್ನತ ಅಧಿಕಾರಿಗಳು ಅನುಮೋದನೆ ನೀಡಿರಲಿಲ್ಲ. ಆದರೂ ಅವರನ್ನು ಭೋಜನ ಮಾತೆಯಾಗಿ ನೇಮಕ ಮಾಡಲಾಗಿತ್ತು’ ಎಂದು ಹೇಳಿದ್ದಾರೆ.

Join Whatsapp