ಅನ್ಯ ಜಾತಿಯ ವಿವಾಹ; ಮಗಳ ಜುಟ್ಟು ಹಿಡಿದು ಎಳೆದಾಡಿದ ರಂಪಾಟ ಪ್ರಕರಣ ಸುಖಾಂತ್ಯ

Prasthutha|

ಮೈಸೂರು: ಅನ್ಯ ಜಾತಿಯ ಯುವಕನ ಜೊತೆ ಪ್ರೇಮ ವಿವಾಹಕ್ಕೆ ಮುಂದಾದ ಮಗಳ ಜುಟ್ಟು ಹಿಡಿದು ಎಳೆದಾಡಿ ಮಾಂಗಲ್ಯ ಸರವನ್ನೂ ಕಿತ್ತೆಸೆದು ತಂದೆ ರಂಪಾಟ ಮಾಡಿದ ಪ್ರಕರಣವು ನಂಜನಗೂಡು ಪೊಲೀಸ್ ಠಾಣೆ ಮೆಟ್ಟಿಲೇರಿ ಕೊನೆಗೆ ಸುಖಾಂತ್ಯಗೊಂಡಿದೆ.

- Advertisement -

ಪೋಷಕರ ವಿರೋಧವನ್ನು ಲೆಕ್ಕಿಸದೆ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಪ್ರೀತಿಸಿದ ಯುವಕನನ್ನು ಮದುವೆಯಾದ ಯುವತಿಯನ್ನು ತಂದೆಯೇ ಕಚೇರಿಯಿಂದ ಜುಟ್ಟು ಹಿಡಿದು ಎಳೆದಾಡಿ ಮಾಂಗಲ್ಯ ಸರವನ್ನೂ ಕಿತ್ತೆಸೆದು ಬಲವಂತವಾಗಿ ಎಳೆದುಕೊಂಡು ಹೋಗಲು ಯತ್ನಿಸಿದ್ದು ಸ್ಥಳೀಯರ ಮಧ್ಯಪ್ರವೇಶದಿಂದ ತಂದೆ ಯತ್ನ ವಿಫಲವಾಗಿತ್ತು.

ತನಗೆ ತನ್ನ ತಂದೆಯಿಂದ ರಕ್ಷಣೆ ಬೇಕು ಎಂದು ಸಾರ್ವಜನಿಕವಾಗಿಯೇ ನಂಜನಗೂಡು ತಾಲೂಕು ಹರತಲೆ ಗ್ರಾಮದ ಯುವತಿಯು ಗೋಳಾಡಿದ್ದಳು. ಆಕೆಯು ಹಲ್ಲರೆ ಗ್ರಾಮದ ಯುವಕ ಕಳೆದ ಒಂದೂವರೆ ವರ್ಷದಿಂದ ಪ್ರೀತಿಸಿದ್ದು ಕಳೆದ ಡಿ. 8 ರಂದು ಮದುವೆ ಆಗಿ ನಿನ್ನೆ ನೋಂದಣಾಧಿಕಾರಿಗಳ ಕಚೇರಿಯಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಲು ಬಂದಿದ್ದರು.

- Advertisement -

ವಿವಾಹ ನೋಂದಣಿ ಪ್ರಕ್ರಿಯೆ ಮುಗಿಸಿ ಕಚೇರಿಯಿಂದ ಹೊರ ಬರುತ್ತಿದ್ದಂತೆಯೇ ಯುವತಿಯ ತಂದೆ ಬಸವರಾಜ ನಾಯ್ಕ ಪ್ರತ್ಯಕ್ಷವಾಗಿ ಮಗಳ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಹಾಕಿ ಜುಟ್ಟು ಹಿಡಿದು ಎಳೆದಾಡುತ್ತಾ ಕರೆದೊಯ್ಯುವ ಪ್ರಯತ್ನ ಮಾಡಿದ್ದಾರೆ. ಸಾರ್ವಜನಿಕರ ಎದುರೇ ಇಂತಹ ಯತ್ನ ನಡೆದಿದೆ. ತಂದೆಯ ಕೈಯಿಂದ ಬಿಡಿಸಿಕೊಳ್ಳಲು ಯುವತಿ ಹರಸಾಹಸ ನಡೆಸಿದ್ದಾಳೆ.

ಈ ವೇಳೆ ಸಾರ್ವಜನಿಕರು ಮಧ್ಯ ಪ್ರವೇಶಿಸಿ ಯುವತಿಯನ್ನು ರಕ್ಷಿಸಿದ್ದಾರೆ. ಯುವತಿ, ತಮ್ಮ ಮದುವೆಗೆ ಪೋಷಕರ ವಿರೋಧ ಇದೆ. ಈ ಮಧ್ಯೆ ಬೆದರಿಕೆಯೂ ಇದೆ ಎಂದು ಪ್ರಿಯತಮನನ್ನು ತಬ್ಬಿಹಿಡಿದು ಆತಂಕ ವ್ಯಕ್ತಪಡಿಸಿದ್ದಳು. ತನ್ನ ತಂದೆಯಿಂದಲೇ ತನಗೆ ರಕ್ಷಣೆ ಬೇಕೆಂದು ನಂಜನಗೂಡು ಪೊಲೀಸ್ ಠಾಣೆಗೆ ದೂರನ್ನು ಕೊಟ್ಟಿದ್ದಳು.

ದೂರಿನನ್ವಯ ತಂದೆ ಬಸವರಾಜ ನಾಯ್ಕ ಅವರನ್ನು ಸೇರಿದಂತೆ ಎರಡೂ ಕುಟುಂಬಗಳನ್ನು ಠಾಣೆಗೆ ಕರೆಸಿ ರಾಜೀ ಮಾಡುವ ಮೂಲಕ ಪ್ರಕರಣಕ್ಕೆ ಪೊಲೀಸರು ಸುಖಾಂತ್ಯ ಹಾಡಿದ್ದಾರೆ.



Join Whatsapp