ಹೊಸದಿಲ್ಲಿ: ಒಂದೆರಡು ಪ್ರಯಾಣಿಕರಿಗೆ ನಮಾಜ್ ಮಾಡುವುದಕ್ಕಾಗಿ ಅವಕಾಶ ಮಾಡಿಕೊಡಲು ರಾಜ್ಯ ಸಾರಿಗೆ ಬಸ್ ಅನ್ನು ನಿಲ್ಲಿಸಿದ ಕಾರಣ ವಜಾಗೊಂಡಿದ್ದ ಉತ್ತರ ಪ್ರದೇಶದ ಬಸ್ ಕಂಡಕ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾನವೀಯತೆಗೆ ಅವರು ಬೆಲೆ ತೆರಬೇಕಾಯಿತು ಎಂದು ಕಂಡಕ್ಟರ್ ಕುಟುಂಬ ಕಣ್ಣೀರು ಹಾಕಿದೆ. ಮೋಹಿತ್ ಯಾದವ್ ಎಂಬ ಬಸ್ ಕಂಡೆಕ್ಟರ್ ಅವರು ಬರೇಲಿ-ದೆಹಲಿ ಜನರತ್ ಬಸ್ ಅನ್ನು ಹೆದ್ದಾರಿಯಲ್ಲಿ ನಿಲ್ಲಿಸಿದ ಕಾರಣ ಜೂನ್‌ನಲ್ಲಿ ಅವರ ಒಪ್ಪಂದವನ್ನು (ಗುತ್ತಿಗೆ ಕೆಲಸ) ರದ್ದುಗೊಳಿಸಲಾಗಿತ್ತು.
ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದ ಅವರು ಮೈನ್‌ಪುರಿಯಲ್ಲಿ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಎಂಟು ಮಂದಿ ಇರುವ ಮೋಹಿತ್ ಯಾದವ್ ಅವರ ಕುಟುಂಬವು ಗುತ್ತಿಗೆ ಕೆಲಸಗಾರನಾಗಿ ಸಿಗುತ್ತಿದ್ದ ₹ 17,000 ಸಂಬಳದಲ್ಲಿ ಬದುಕು ಸಾಗಿಸುತ್ತಿತ್ತು. ಕೆಲಸದಿಂದ ವಜಾಗೊಂಡ ಬಳಿಕ ಹಲವೆಡೆ ಅರ್ಜಿ ಸಲ್ಲಿಸಿದ್ದರೂ ಅವರಿಗೆ ಕೆಲಸ ಸಿಕ್ಕಿರಲಿಲ್ಲ.
ಉತ್ತರ ಪ್ರದೇಶ ಸಾರಿಗೆ ಇಲಾಖೆ ತನ್ನ ಪತಿ ಹೇಳುತ್ತಿರುವುದನ್ನು ಕೇಳದೆಯೇ ಅವರನ್ನು ಕೆಲಸದಿಂದ ವಜಾ ಮಾಡಿತ್ತು ಎಂದು ಮೋಹಿತ್ ಯಾದವ್ ಪತ್ನಿ ರಿಂಕಿ ಯಾದವ್ ಆರೋಪಿಸಿದ್ದಾರೆ. ಆಕೆಯ ಪತಿ ಬರೇಲಿಯಲ್ಲಿರುವ ಪ್ರಾದೇಶಿಕ ವ್ಯವಸ್ಥಾಪಕರನ್ನು ಆಗಾಗ್ಗೆ ಭೇಟಿ ಮಾಡುತ್ತಿದ್ದರು, ಆದರೆ ಅವರು ನನ್ನ ಪತಿಯ ಮಾತನ್ನು ಕೇಳಲಿಲ್ಲ.
ಅವರ ಮಾತನ್ನೂ ಕೇಳದೆ ಒಪ್ಪಂದವನ್ನು ರದ್ದುಗೊಳಿಸಲಾಗಿದೆ. ಈ ಖಿನ್ನತೆಗೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಪತಿ ಮಾನವೀಯತೆಗೆ ಬೆಲೆ ತೆತ್ತಿದ್ದಾರೆ ಎಂದು ಮಾಧ್ಯಮದವರಲ್ಲಿ ಮಾತನಾಡಿದ ರಿಂಕಿ ಹೇಳಿದ್ದಾರೆ.
ಬಸ್ ನಿಲ್ಲಿಸಿದ ಸಂದರ್ಭ ಪ್ರಯಾಣಿಕರೊಬ್ಬರು ಚಿತ್ರೀಕರಿಸಿದ ವಿಡಿಯೋ ವ್ಯಾಪಕವಾಗಿ ವೈರಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಮೋಹಿತ್ ಯಾದವ್ ಮತ್ತು ಬಸ್ ಚಾಲಕನನ್ನು ಯುಪಿ ಸಾರಿಗೆ ಇಲಾಖೆ ಯಾವುದೇ ಸೂಚನೆ ನೀಡದೆ ಅಮಾನತುಗೊಳಿಸಿತ್ತು