ರೈತರಿಗೆ, ಮಧ್ಯಮ ವರ್ಗಕ್ಕೆ ಮತ್ತು ಬಡವರಿಗೆ ದ್ರೋಹ ಬಗೆಯುವ ಕಳ್ಳ ದಾರಿಯ ಬಜೆಟ್: SDPI

Prasthutha|

ಬೆಂಗಳೂರು: ಒಕ್ಕೂಟ ಸರ್ಕಾರ ಮಂಡಿಸಿರುವ 2023 – 24ರ ಬಜೆಟ್ ಪ್ರತಿಯೊಂದು ಹಂತದಲ್ಲಿಯೂ ರೈತರು, ಮಧ್ಯಮ ವರ್ಗ ಮತ್ತು ಬಡವರಿಗೆ ಮೋಸ ಮಾಡುವ ಕಳ್ಳ ದಾರಿಯ ಬಜೆಟ್ಟಾಗಿದೆ. ಆದರೆ ಮಾಧ್ಯಮಗಳೂ ಸೇರಿದಂತೆ ಬಿಜೆಪಿಯ ಪ್ರತಿಯೊಬ್ಬರೂ ಆದಾಯ ತೆರಿಗೆಯಲ್ಲಾದ ಬದಲಾವಣೆಯನ್ನು ಮಾತ್ರ ಚರ್ಚೆಗೆ ಹಚ್ಚಿ ಮುಖ್ಯ ವಿಚಾರಗಳನ್ನು ಬಚ್ಚಿಡುವ ಪ್ರಜ್ಞಾಪೂರ್ವಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

ಮಧ್ಯಮ ವರ್ಗಕ್ಕೆ ಆದಾಯ ತೆರಿಗೆಯಲ್ಲಿ ಅಲ್ಪ ವಿರಾಮ ನೀಡಿ ಮಧ್ಯಮ ವರ್ಗವನ್ನು ಅತಿ ಹೆಚ್ಚು ಬಾಧಿಸುವ ಶಿಕ್ಷಣ ಕ್ಷೇತ್ರ ಮತ್ತು ಆರೋಗ್ಯ ಕ್ಷೇತ್ರದ ಅನುದಾನದಲ್ಲಿ ಗಣನೀಯವಾದ ಕಡಿತ ಮಾಡಲಾಗಿದೆ. ಕಳೆದ ವರ್ಷ ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ಟಿನ 2.64% ಅನುದಾನ ಮೀಸಲಿಡಲಾಗಿತ್ತು. ಆದರೆ ಈ ಬಾರಿ ಅದನ್ನು 2.51% ಗೆ ಇಳಿಕೆ ಮಾಡಲಾಗಿದೆ. ಇದು ನೋಡಲು ಅಲ್ಪ ಸಂಖ್ಯೆಯ ಇಳಿಕೆಯಾಗಿ ಕಂಡರೂ ದೊಡ್ಡ ಗಾತ್ರದ ಬಜೆಟ್ ನಲ್ಲಿ ಸಾವಿರಾರು ಕೋಟಿಗಳಷ್ಟು ಬದಲಾವಣೆಯನ್ನು ತರುತ್ತದೆ. ಅದೇ ರೀತಿ ಆರೋಗ್ಯ ಕ್ಷೇತ್ರದ ಅನುದಾನದಲ್ಲಿ ಕಳೆದ ಬಾರಿ 2.2% ಇದ್ದದ್ದನ್ನು ಈ ಬಾರಿ 1.98% ಇಳಿಕೆ ಮಾಡಲಾಗಿದೆ. ಮಧ್ಯಮ ವರ್ಗದ ಅತಿ ದೊಡ್ಡ ಹೊರೆಯಾದ ಅಡಿಗೆ ಅನಿಲ ಸಬ್ಸಿಡಿಯನ್ನು ಸಂಪೂರ್ಣವಾಗಿ ಅಳಿಸಿ ಹಾಕಲಾಗಿದೆ. ಕಳೆದ ಬಾರಿ ಎಲ್.ಪಿ.ಜಿ ಸಬ್ಸಿಡಿಗೆ 9,170 ಕೋಟಿಗಳನ್ನು ಮೀಸಲಿಡಲಾಗಿತ್ತು. ಈ ಬಾರಿ ಅದನ್ನು ಕೇವಲ 257 ಕೋಟಿಗೆ ಇಳಿಸಲಾಗಿದೆ. ಇಂತಹ ಸಾಕಷ್ಟು ಅಂಶಗಳಿಂದ ಮಧ್ಯಮ ವರ್ಗವನ್ನು ದೊಡ್ಡ ಮಟ್ಟದಲ್ಲಿ ಬಾಧಿಸುವ ಕೆಲಸ ಈ ಬಾರಿ ಮೋದಿ ಸರ್ಕಾರ ಮಾಡಿದೆ.

ಕೃಷಿ ಕ್ಷೇತ್ರ ಮತ್ತು ಗ್ರಾಮೀಣ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಮೂಲಕ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತಾನು ರೈತ ವಿರೋಧಿ ಸರ್ಕಾರ ಎಂದು ದೊಡ್ಡ ಧ್ವನಿಯಲ್ಲಿ ಹೇಳಿದೆ. ಗ್ರಾಮೀಣ ಅಭಿವೃದ್ಧಿಗಾಗಿ ನೀಡುವ ಅನುದಾನವನ್ನು ಕಳೆದ ವರ್ಷದ 5.81% ಇಂದ 5.29% ಗೆ ಇಳಿಕೆ ಮಾಡಿದೆ. ಅದೇ ರೀತಿ ಕೃಷಿ ಸಂಬಂಧಿತ ಇತರೆ ಅನುದಾನಗಳನ್ನು 3.84% ಇಂದ 3.20% ಗೆ ಇಳಿಕೆ ಮಾಡಿದೆ. ಉಳಿದಂತೆ ಕೃಷಿಗೆ ಸಂಬಂಧಿಸಿದ ಸಾಕಷ್ಟು ಅನುದಾನಗಳಲ್ಲಿ ಭಾರಿ ಇಳಿಕೆ ಮಾಡಿದೆ. ಅವುಗಳಲ್ಲಿ ಕೆಲವನ್ನು ನೋಡುವುದಾದರೆ;

- Advertisement -

ಫಸಲ್ ಬಿಮಾ ಯೋಜನೆ – 2022-23: 15,500 ಕೋಟಿ; 2023-24: 13,625 ಕೋಟಿ.

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ – 2022-23: 90,000 ಕೋಟಿ; 2023-24: 60,000 ಕೋಟಿ.

ರಸಗೊಬ್ಬರ ಅನುದಾನ – 2022-23: 2,15,000 ಕೋಟಿ; 2023-24: 1,75,000 ಕೋಟಿ.

ಪಿಎಂ ಸಮ್ಮಾನ್ ನಿಧಿ – 2022-23: 78,000 ಕೋಟಿ; 2023-24: 65,000 ಕೋಟಿ.

ಈ ರೀತಿಯಾಗಿ ರೈತ ಸಮುದಾಯ ಮತ್ತು ಗ್ರಾಮೀಣ ಪ್ರದೇಶಗಳಿಗೆ ನೀಡುವ ಅನುದಾನದಲ್ಲಿ ಸಾಕಷ್ಟು ದೊಡ್ಡ ಪ್ರಮಾಣದ ಕಡಿತ ಮಾಡಲಾಗಿದೆ ಎಂದು ಮಜೀದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನು ಕರ್ನಾಟಕಕ್ಕೆ ಯಾವುದೇ ರೀತಿಯ ವಿಶೇಷ ಯೋಜನೆ ಅಥವಾ ಅನುದಾನಗಳನ್ನು ನೀಡದೆ ಕನ್ನಡಿಗರಿಗೆ ಮೋದಿ ಸರ್ಕಾರ ದ್ರೋಹ ಬಗೆದಿದೆ. ಇದು ಚುನಾವಣೆ ವರ್ಷವಾಗಿದ್ದರಿಂದ ಆ ನೆಪದಲ್ಲಾದರೂ ಕರ್ನಾಟಕಕ್ಕೆ ಒಂದಷ್ಟು ಹೆಚ್ಚುವರಿ ಅನುದಾನ ಅಥವಾ ಯೋಜನೆಗಳು ದೊರೆಯಬಹುದು ಎಂಬ ನಿರೀಕ್ಷೆ ಎಲ್ಲರಲ್ಲಿತ್ತು. ಆದರೆ ಕನ್ನಡಿಗರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಬಿಜೆಪಿ ಸರ್ಕಾರ ಯಾವುದೇ ರೀತಿಯ  ನೆರವು ನೀಡಿಲ್ಲ. ಕೇವಲ ಭದ್ರಾ ಮೇಲ್ದಂಡೆಯ ಯೋಜನೆಗೆ 5,300 ಕೋಟಿಗಳನ್ನು ಘೋಷಿಸಿರುವುದನ್ನು ಬಿಟ್ಟರೆ ಬೇರೆ ಯಾವುದೇ ರೀತಿಯಿಂದಲೂ ಕೂಡ ಕರ್ನಾಟಕಕ್ಕೆ ವಿಶೇಷವಾಗಿ ಅನುಕೂಲವಾಗುವ ಯೋಜನೆಗಳನ್ನು ಬಜೆಟ್ ನಲ್ಲಿ ನೀಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯು ಕೂಡ ಸರ್ಕಾರ ಬದಲಾಗುವ ಸಮಯದಲ್ಲಿ ಘೋಷಣೆ ಮಾಡಿದ್ದು ಈ ವರ್ಷ ಅದು ಜಾರಿಯಾಗುವುದಿಲ್ಲ. ಸರ್ಕಾರ ಬದಲಾದರೆ ಆ ಅನುದಾನ ಸಿಗುವ ಭರವಸೆಯೂ ಇಲ್ಲ. ಹಾಗಾಗಿ ಈ ಯೋಜನೆಯು ಕೂಡ ಕೇವಲ ಕನ್ನಡಿಗರ ಮೂಗಿಗೆ ತುಪ್ಪ ಸವರುವ ತಂತ್ರ ಎಂದು ಅವರು ಆರೋಪಿಸಿದರು.

ಇನ್ನು ಅಲ್ಪಸಂಖ್ಯಾತ ವಿಚಾರವಾಗಿ ಮೋದಿ ನೇತೃತ್ವದ ಕೋಮುವಾದಿ ಬಿಜೆಪಿ ಸರ್ಕಾರದ ಶೋಷಣೆ ಮುಂದುವರೆದಿದೆ. ಈ ಬಾರಿಯ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಶೈಕ್ಷಣ ಕ್ಷೇತ್ರಕ್ಕೆ ನೀಡುವ ಅನುದಾನವನ್ನು ಯಾರೂ ಊಹಿಸದ ಮಟ್ಟಕ್ಕೆ ಇಳಿಸಲಾಗಿದೆ. ಕಳೆದ ಬಾರಿಯ ಬಜೆಟ್ ನಲ್ಲಿ 160 ಕೋಟಿಗಳನ್ನು ಮೀಸಲಿರಿಸಿದ್ದ ಈ ಕ್ಷೇತ್ರಕ್ಕೆ ಈ ಬಾರಿ ಕೇವಲ ಹತ್ತು ಕೋಟಿಗಳನ್ನು ಮಾತ್ರ ನೀಡಲಾಗಿದೆ.

ಒಟ್ಟಾರೆಯಾಗಿ ಇಡೀ ಬಜೆಟ್ ರೈತ, ಬಡವರ, ಮಧ್ಯಮ ವರ್ಗದ ಮತ್ತು ಅಲ್ಪಸಂಖ್ಯಾತ ವಿರೋಧಿ ಬಜೆಟ್ ಆಗಿದೆ. ಇದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಪೂರ್ಣವಾಗಿ ತಿರಸ್ಕರಿಸುತ್ತದೆ ಮತ್ತು ಇದರ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಎಲ್ಲ ಕಾರ್ಯಗಳನ್ನು ತನ್ನ ಶಕ್ತಿ ಮೀರಿ ಮಾಡಲಿದೆ ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ಹೇಳಿದ್ದಾರೆ.

Join Whatsapp