ಪಾರಿವಾಳ ಹಿಡಿಯುವಾಗ ವಿದ್ಯುತ್ ಸ್ಪರ್ಶಿಸಿ ಗಾಯಗೊಂಡಿದ್ದ ಬಾಲಕ ಮೃತ್ಯು

Prasthutha|

ಬೆಂಗಳೂರು: ಪಾರಿವಾಳ ಹಿಡಿಯುವಾಗ ವಿದ್ಯುತ್ ಸ್ಪರ್ಶಿಸಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಮೃತಪಟ್ಟಿದ್ದಾನೆ.

ಹೈಟೆನ್ಷನ್ ವಿದ್ಯುತ್ ತಂತಿ ಮೇಲೆ ಕುಳಿತಿದ್ದ ಪಾರಿವಾಳವನ್ನು ಹಿಡಿಯಲು ಹೋದಾಗ ವಿದ್ಯುತ್ ಸ್ಪರ್ಶಿಸಿ ಇಬ್ಬರು ಬಾಲಕರು ಗಂಭೀರ ಗಾಯಗೊಂಡಿದ್ದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಓರ್ವ ಬಾಲಕ ಸುಪ್ರೀತ್ ಬೆಳಗ್ಗೆ 7.30ರ ವೇಳೆ ಮೃತಪಟ್ಟಿರುವುದಾಗಿ ವರದಿಯಾಗಿದೆ.

- Advertisement -

ಸುಪ್ರೀತ್ ಹಾಗೂ ಚಂದ್ರು ಇಬ್ಬರು ಮನೆಯ ಮಹಡಿ ಮೇಲಿದ್ದ ಪಾರಿವಾಳವನ್ನು ಹಿಡಿಯಲು ಹೋಗಿ ಕಬ್ಬಿಣದ ರಾಡ್‌ನಿಂದ ಹೈಟೆನ್ಷನ್ ವಯರ್ ಅನ್ನು ಮುಟ್ಟಿದ್ದರು. ಘಟನೆಯಿಂದ ಬಾಲಕ ಸುಪ್ರೀತ್ ದೇಹದಲ್ಲಿ ಸುಮಾರು ಶೇ.90 ರಷ್ಟು ಸುಟ್ಟ ಗಾಯಗಳಾಗಿತ್ತು. ಇನ್ನೊಬ್ಬ ಬಾಲಕ ಚಂದ್ರುವಿನ ದೇಹದಲ್ಲಿ ಕೂಡಾ ಸುಮಾರು ಶೇ.70 ರಷ್ಟು ಸುಟ್ಟ ಗಾಯಗಳಾಗಿತ್ತು. ದುರ್ಘಟನೆ ನಡೆದ ತಕ್ಷಣವೇ ಬಾಲಕರನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕ ಸುಪ್ರೀತ್ ಕೊನೆಯುಸಿರೆಳೆದಿದ್ದಾನೆ.

ಬಾಲಕ ಸುಪ್ರೀತ್ ತಂದೆ ಮಂಜುನಾಥ್ ಹಾಗೂ ತಾಯಿ ಪ್ರೇಮ ಅವರ ಒಬ್ಬನೇ ಮಗನಾಗಿದ್ದ. ಘಟನೆಯಲ್ಲಿ ಗಾಯಗೊಂಡಿರುವ ಇನ್ನೊಬ್ಬ ಬಾಲಕ ಚಂದ್ರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

- Advertisement -