ನವದೆಹಲಿ: ಕಾಂಗ್ರೆಸ್ ಅಧ್ಯಕ್ಷರಾಗಲು ರಾಹುಲ್ ಗಾಂಧಿ ಹಿಂದೇಟು ಹಾಕಿದ್ದು, ಇದರ ಮಧ್ಯೆಯೇ ಕಾರ್ಯಕರ್ತರು ರಾಹುಲ್ ಮೇಲೆ ಒತ್ತಡ ಹಾಕಲು ಆರಂಭಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಕಾಂಗ್ರೆಸ್ಸನ್ನು ಬಲವಾಗಿ ಸುತ್ತಿಕೊಂಡಾಗ ರಾಹುಲ್ ಗಾಂಧಿಯವರು ಪಕ್ಷದ ಅಧ್ಯಕ್ಷತೆಗೆ ರಾಜೀನಾಮೆ ನೀಡಿದ್ದರು. ಈಗಲೂ ಅವರು ಭಾರತ್ ಜೋಡೋದಲ್ಲಿ ತೊಡಗಿಕೊಂಡು ಅಧ್ಯಕ್ಷತೆ ಚುನಾವಣೆಯಿಂದ ದೂರವೇ ಉಳಿದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ, ಮನೀಶ್ ತಿವಾರಿ ಹೆಸರು ಕೇಳಿಬಂದಿತ್ತಾದರೂ, ಶಶಿ ತರೂರ್, ಅಶೋಕ್ ಗೆಹ್ಲೋಟ್ ಮೊದಲಾದವರ ಹೆಸರು ಕಾಂಗ್ರೆಸ್ ಅಧ್ಯಕ್ಷತೆಗೆ ಮುಂಚೂಣಿಯಲ್ಲಿದೆ. ಗೆಹ್ಲೋಟ್ ಮತ್ತು ತರೂರ್ ಜೊತೆಗೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಯವರೇ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಕಾಂಗ್ರೆಸ್ಸಿನ ನಾನಾ ರಾಜ್ಯಗಳ ಪಧಾದಿಕಾರಿಗಳಲ್ಲಿ ಹೆಚ್ಚಿನವರು ರಾಹುಲ್ ಗಾಂಧಿಯವರೇ ಮತ್ತೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಬೇಕು ಎಂದು ಒತ್ತಡ ಹಾಕಿದ್ದಾರೆ.
ನಾನು ಖಂಡಿತ ಸ್ಪರ್ಧಿಸುವುದಿಲ್ಲ. ತರೂರ್, ಗೆಹ್ಲೋಟ್ ಸ್ಪರ್ಧಿಸುವುದಾದರೆ ನಾನು ಬರೇ ಮತದಾರ ಎಂದು ದಿಗ್ವಿಜಯ ಸಿಂಗ್ ಹೇಳಿದ್ದಾರೆ.
ಗೆಹ್ಲೋಟ್ ರೊಡನೆ ಮಾತನಾಡುವಾಗ ಸೋನಿಯಾ ಗಾಂಧಿಯವರು ನಾನು ಚುನಾವಣೆಯಲ್ಲಿ ಅಲಿಪ್ತರಾಗಿ ಉಳಿಯುವುದಾಗಿ ಹೇಳಿದ್ದಾರೆ. 22 ವರ್ಷಗಳ ಬಳಿಕ ಕಾಂಗ್ರೆಸ್ ಅಧ್ಯಕ್ಷತೆಗೆ ಮತದಾನ ನಡೆಯುತ್ತಿದೆ.
ಆದರೆ ಕಾರ್ಯಕರ್ತರ ಅಳಲು ಏನೆಂದರೆ ಗೆಹ್ಲೋಟ್ ಆಗಲಿ ತರೂರ್ ಆಗಲಿ ಭಾರತ್ ಜೋಡೋ ಮಾಡಲಾರರು, ಅದಕ್ಕೆ ರಾಹುಲ್ ಗಾಂಧಿಯವರೇ ಬೇಕು ಎನ್ನುವುದು ಈಗಲೂ ಅವರ ಅಭಿಮತವಾಗಿದೆ.
ಒಬ್ಬ ಸ್ಪರ್ಧಿಯಾಗಿರುವ ಅಶೋಕ್ ಗೆಹ್ಲೋಟ್ ಅವರು ನಾನು ಈಗಲೂ ರಾಹುಲ್ ಗಾಂಧಿಯವರು ಬಂದು ಅಧ್ಯಕ್ಷತೆ ಪಡೆಯುವರು ಎಂದು ನಂಬಿದ್ದೇನೆ ಎಂದಿದ್ಧಾರೆ. ಕೊನೆಯದಾಗಿ ಇನ್ನೊಮ್ಮೆ ನಾನು ರಾಹುಲ್ ರೊಂದಿಗೆ ಮಾತನಾಡುವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಚುನಾವಣಾ ಪ್ರಾಧಿಕಾರದ ಚೇರ್ಮನ್ ಮಧುಸೂದನ್ ಮಿಸ್ತ್ರಿಯವರು ಇಂದು ಕೂಡ ಮತ್ತೊಮ್ಮೆ ಮತದಾರರ ಪಟ್ಟಿಯನ್ನು ಸರಿ ತೂಗಿಸಿ ಒರೆಗೆ ಹಚ್ಚಿದ್ದಾರೆ. ಎಲ್ಲ ರಾಜ್ಯಗಳಲ್ಲಿ ಮತದಾನ ನಡೆಯಬೇಕಾಗಿದೆ.
ಇತ್ತ ಮತದಾನದ ನಡುವೆಯೇ ಮತ್ತೆ ರಾಹುಲ್ – ಗೆಹ್ಲೋಟ್ ಮಾತುಕತೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಇದರ ನಡುವೆ ಗೆಹ್ಲೋಟ್ ಅಧ್ಯಕ್ಷರಾದರೆ ರಾಜಸ್ತಾನದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಯೂ ಏಳುತ್ತದೆ. “ನಾನು ಒಂದು ಹುದ್ದೆಯಲ್ಲಿರಲಿ, ಎರಡು ಹುದ್ದೆಯಲ್ಲಿರಲಿ ಅಥವಾ ಯಾವುದೇ ಹುದ್ದೆಯಲ್ಲಿ ಇಲ್ಲದಿರಲಿ ನನಗೆ ಯಾವುದೇ ಸಮಸ್ಯೆ ಇಲ್ಲ. ನಾನು ರಾಹುಲ್ ರನ್ನು ಕೂಡಿಕೊಂಡು ಫ್ಯಾಸಿಸ್ಟ್ ಬಿಜೆಪಿಯ ಹೋರಾಡುವ ಗುರಿಯನ್ನಷ್ಟೆ ಹೊಂದಿದ್ದೇನೆ” ಎಂದು ಗೆಹ್ಲೋಟ್ ಹೇಳಿದ್ದಾರೆ.
ಆದರೆ ರಾಷ್ಟ್ರೀಯ ಅಧ್ಯಕ್ಷರು ಎರಡನ್ನೂ ನಿಬಾಯಿಸುವುದು ಸಾಧ್ಯವಿಲ್ಲ ಎಂದು ಕಾಂಗ್ರೆಸ್ಸಿನ ಹೆಚ್ಚಿನ ಕಾರ್ಯಕರ್ತರ ಅಭಿಪ್ರಾಯವಾಗಿದೆ.