ಮಂಗಳೂರು: NIA ದಾಳಿಯ ವೇಳೆ ಕ್ಯಾಂಟೀನ್ ಸಿಬ್ಬಂದಿಯ 2500 ರೂ. ಕಳ್ಳತನ!

Prasthutha|

ಮಂಗಳೂರು: ಪಿಎಫ್ಐ ಮತ್ತು ಎಸ್ ಡಿಪಿಐ ಕಚೇರಿ ಮೇಲೆ ಎನ್ ಐಎ ದಾಳಿ ನಡೆಸಿದ ಸಂದರ್ಭದಲ್ಲಿ ಕೋಸ್ಟಲ್ ಬಿಲ್ಡಿಂಗ್ ನ ಮೇಲ್ಮಹಡಿಯ ಕ್ಯಾಂಟೀನ್ ಒಂದರಲ್ಲಿ ಕೆಲಸಕ್ಕಿದ್ದ ಸಿಬ್ಬಂದಿಯ 2500 ರೂ. ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಕ್ಯಾಂಟೀನ್ ಸಿಬ್ಬಂದಿ ಇಸ್ಮಾಯೀಲ್ ಎಂಬವರು ಆರೋಪ ಮಾಡಿದ್ದು, ಈ ಹಣವನ್ನು ಎನ್ ಐಎ ಅಥವಾ ಪೊಲೀಸರೇ ತೆಗೆದಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.


ಕೆಲವು ತಿಂಗಳುಗಳಿಂದ ನಾನು ಕೋಸ್ಟಲ್ ಕ್ಯಾಂಟೀನ್ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದೇನೆ. ರಾತ್ರಿ ವೇಳೆ ಇಲ್ಲೇ ತಂಗುತ್ತೇನೆ. ಕಳೆದ ರಾತ್ರಿ 3.30ರ ಸುಮಾರಿಗೆ ನಾನು ಮಲಗಿದ್ದ ಕೊಠಡಿಯ ಬಾಗಿಲು ಬಡಿಯುವ ಶಬ್ಧ ಕೇಳಿ ಎಚ್ಚರಗೊಂಡೆ. ಬಾಗಿಲು ತೆಗೆದಾಗ ಐದಾರು ಅಪರಿಚಿತರು ಒಳಗೆ ಬಂದರು. ಹೊರಗಡೆ ಬಂದೂಕು ಹಿಡಿದ ಪೊಲೀಸರು ಇದ್ದರು. ನನ್ನ ಮೊಬೈಲ್ ತೆಗೆದುಕೊಂಡರು. ನೀವು ಯಾರೆಂದು ಕೇಳಿದಾಗ, ನಾವು ಎನ್ಐಎ ಎಂದು ಹೇಳಿದರು.

- Advertisement -


ನನ್ನ ಬ್ಯಾಗ್ ತಪಾಸಣೆ ನಡೆಸಿ, ಡ್ರೈವಿಂಗ್ ಲೈಸನ್ಸ್, ಮತ್ತಿತರ ದಾಖಲೆಗಳನ್ನು ಪರಿಶೀಲಿಸಿದರು. ಕ್ಯಾಂಟೀನ್ ಗೆ ಸಂಬಂಧಿಸಿದ 3591 ರೂ.ಹಣವನ್ನು ರಾತ್ರಿ ಲೆಕ್ಕ ಮಾಡಿ ಪರ್ಸ್ ನಲ್ಲಿ ಇಟ್ಟಿದ್ದೆ. ಈ ಪರ್ಸನ್ನು ಪರಿಶೀಲಿಸಿ ಹಣದೊಂದಿಗೆ ಬ್ಯಾಗ್ ಅನ್ನು ಹಿಂದಿರುಗಸಿದರು. ಬಳಿಕ ಅಂಗಿ ತೊಡುವಂತೆ ಹೇಳಿದರು. ಅಂಗಿ ತೊಟ್ಟ ಬಳಿಕ ಕೆಳಗಿನ ಮಹಡಿಯಲ್ಲಿರುವ ಎಸ್ ಡಿಪಿಐ ಕಚೇರಿಗೆ ಕರೆದೊಯ್ದರು. ಅಲ್ಲಿ ಬಾಗಿಲು ಮುರಿದಿತ್ತು. ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಅಲ್ಲಿ ಕಾಗದವೊಂದಕ್ಕೆ ಸಹಿ ಹಾಕಲು ಸೂಚಿಸಿದರು. ನನಗೂ ಎಸ್ ಡಿಪಿಐಗೂ ಸಂಬಂಧವಿಲ್ಲ. ನಾನು ಕ್ಯಾಂಟೀನ್ ಸಿಬ್ಬಂದಿ ಎಂದು ಹೇಳಿ ಸಹಿ ಹಾಕಲು ನಿರಾಕರಿಸಿದೆ. ಬೆಳಗ್ಗೆ 9 ಗಂಟೆಯವರೆಗೂ ಅದೇ ಕಚೇರಿಯಲ್ಲಿ ಕೂರಿಸಿದರು. 9 ಗಂಟೆಗೆ ನನ್ನನ್ನು ಬಿಟ್ಟು ಕಳುಹಿಸಿದರು.


ಆಗ ನನ್ನ ಕೊಠಡಿಗೆ ಬಂದು ಪರ್ಸ್ ಪರಿಶೀಲಿಸಿದಾಗ ಅದರಲ್ಲಿದ್ದ 500 ರೂಪಾಯಿಯ 5 ನೋಟುಗಳು ಕಾಣೆಯಾಗಿದ್ದವು. ಇದನ್ನು ಎನ್ ಐಎ ಅಥವಾ ಪೊಲೀಸರೇ ಕದ್ದಿರಬಹುದು. ಏಕೆಂದರೆ ಇಲ್ಲಿಗೆ ಅವರಲ್ಲದೆ ಬೇರೆ ಯಾರೂ ಬಂದಿಲ್ಲ. ಅಷ್ಟು ದೊಡ್ಡವರು ನನ್ನಂತಹ ಬಡ ವ್ಯಕ್ತಿಯ ಹಣ ತೆಗೆದುಕೊಂಡಿದ್ದಾರೆ ಎಂದರೆ ನನಗೇ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಇಸ್ಮಾಯೀಲ್ ಬೇಸರ ವ್ಯಕ್ತಪಡಿಸಿದ್ದಾರೆ.

- Advertisement -