ಬೆಂಗಳೂರು: ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಬದುಕನ್ನು ಆಧರಿಸಿದ ಸಾಕ್ಷ್ಯಚಿತ್ರ ‘ಗೌರಿ’ ಅಂತಾರಾಷ್ಟ್ರೀಯ ಮಟ್ಟದ ಹಲವು ಸಿನಿಮೇಳಗಳಿಗೆ ಆಯ್ಕೆಯಾಗಿದೆ.
ಅಲ್ಲದೆ, ಗೌರಿ ಅವರ ಸಹೋದರಿ ಕವಿತಾ ಲಂಕೇಶ್ ಅವರು ನಿರ್ದೇಶಿಸಿದ ಸಾಕ್ಷ್ಯಚಿತ್ರವು ಟೊರೆಂಟೊ ವುಮೆನ್ಸ್ ಫಿಲ್ಮ್ ಫೆಸ್ಟಿವಲ್ 2022ರ ‘ಅತ್ಯುತ್ತಮ ಮಾನವ ಹಕ್ಕುಗಳ ಚಿತ್ರ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಕೆನಡಾದ ಮಾಂಟ್ರಿಯಲ್ ನಲ್ಲಿ ನಡೆಯಲಿರುವ ಪ್ರತಿಷ್ಠಿತ ದಕ್ಷಿಣ ಏಷ್ಯಾದ ಫಿಲ್ಮ್ ಫೆಸ್ಟಿವಲ್ ಗೆ ಗೌರಿ ಸಾಕ್ಷ್ಯಚಿತ್ರ ಆಯ್ಕೆಯಾಗಿದೆ. ಆ್ಯಮ್ ಸ್ಟರ್ ಡಾಂನ ಅಂತಾರಾಷ್ಟ್ರೀಯ ಸಾಕ್ಷ್ಯಚಿತ್ರಗಳ ಹಬ್ಬ, ಸಂಡನ್ಸ್ ಫಿಲ್ಮ್ ಫೆಸ್ಟಿವಲ್ ಮತ್ತು ಇತರ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಗಳಿಗೂ ಆಯ್ಕೆಯಾಗಿದೆ.
ಭಾರತದಲ್ಲಿ ಪತ್ರಕರ್ತರು ಎದುರಿಸುತ್ತಿರುವ ಜೀವ ಬೆದರಿಕೆಗಳು, ದೈಹಿಕ ಮತ್ತು ಮಾನಸಿಕ ಹಿಂಸೆಗಳನ್ನು ಈ ಸಾಕ್ಷ್ಯಚಿತ್ರವು ಬಹಿರಂಗಪಡಿಸುತ್ತದೆ.