ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಪಾನಮತ್ತರಾಗಿದ್ದರು ಎಂಬ ಕಾರಣಕ್ಕೆ ಜರ್ಮನಿಯಿಂದ ದೆಹಲಿಗೆ ತೆರಳುತ್ತಿದ್ದ ವಿಮಾನದಿಂದ ಕೆಳಗಿಳಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.
ಸತ್ಯಾಸತ್ಯತೆಗಳನ್ನು ಪರಿಶೀಲಿಸಲು ಇದೊಂದು ಪ್ರಮುಖ ವಿಚಾರವಾಗಿದೆ ಎಂದು ಸಿಂಧಿಯಾ ಹೇಳಿದ್ದಾರೆ. ಅಲ್ಲದೆ ಲುಫ್ತಾನ್ಸಾ ಏರ್ಲೈನ್ಸ್ ನಿಂದ ವಿವರವಾದ ವರದಿಯನ್ನು ಕೋರಿದ್ದಾರೆ.
ಜರ್ಮನಿಯ ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ ದೆಹಲಿಗೆ ಹೊರಟಿದ್ದ ಲುಫ್ಥಾನ್ಸ ವಿಮಾನದಿಂದ ಭಗವಂತ ಮಾನ್ ರನ್ನು ಕೆಳಗಿಳಿಸಲಾಗಿದೆ ಎಂದು ಆಪಾದಿಸಲಾಗಿತ್ತು.
‘ಫ್ರಾಂಕ್ಫರ್ಟ್ ವಿಮಾನ ನಿಲ್ಧಾಣದಲ್ಲಿ ಲುಫ್ಥಾನ್ಸ ವಿಮಾನದಿಂದ ಭಗವಂತ ಮಾನ್ ಅವರನ್ನು ಕೆಳಗಿಳಿಸಲಾಗಿದೆ. ಕಾರಣ ಮಾನ್ ಅವರು ಪಾನಮತ್ತರಾಗಿದ್ದರು’ ಎಂದು ಶಿರೋಮಣಿ ಅಕಾಲಿ ದಳ (ಎಸ್ಎಡಿ)ದ ಮುಖ್ಯಸ್ಥ ಸುಖ್ಬಿರ್ ಸಿಂಗ್ ಬಾದಲ್ ಅವರು ಆಪಾದಿಸಿದ್ದರು.
ಈ ಕುರಿತು ಸತ್ಯಾಸತ್ಯತೆಗಳನ್ನು ಪರಿಶೀಲಿಸುವಂತೆ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಪತ್ರ ಬರೆದಿದ್ದರು.
ಈ ಘಟನೆಯು ವಿದೇಶದಲ್ಲಿ ನಡೆದದ್ದಾಗಿದೆ. ಸತ್ಯಾಸತ್ಯತೆಗಳನ್ನು ಪರಿಶೀಲಿಸಬೇಕಿದೆ. ಲುಫ್ಥಾನ್ಸ ವಿಮಾನಯಾನಕ್ಕೆ ವಿವರಗಳನ್ನು ನೀಡುವಂತೆ ವಿನಂತಿಸಲಾಗಿದೆ ಎಂದು ಸಿಂಧಿಯಾ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.
ಮಾನ್ ಅವರು 8 ದಿನಗಳ ಜರ್ಮನಿ ಪ್ರವಾಸದ ಬಳಿಕ ಸೋಮವಾರ ಪಂಜಾಬ್ಗೆ ಹಿಂದಿರುಗಿದ್ದಾರೆ.