ನವದೆಹಲಿ: ಕೇರಳ ರಾಜ್ಯದಲ್ಲಿ ನಾಯಿಗಳ ದಾಳಿ ವಿರುದ್ಧ ತಮ್ಮನ್ನು ರಕ್ಷಿಸಿಕೊಳ್ಳಲು ಅವುಗಳ ಸಾಮೂಹಿಕ ಹತ್ಯೆಗಳ ವರದಿಗಳು ಸುದ್ದಿಯಾಗುತ್ತಿರುವುದನ್ನು ಮರುಪರಿಶೀಲಿಸುವಂತೆ ಭಾರತೀಯ ಆರಂಭಿಕ ಆಟಗಾರ ಶಿಖರ್ ಧವನ್ ಟ್ವೀಟ್ ಮಾಡಿದ್ದಾರೆ, ಈ ಕುರಿತು ಸಾರ್ವಜಿಕರಿಂದ ವ್ಯಾಪಕ ಆಕ್ರೋಶವ್ಯಕ್ತವಾಗಿದೆ.
ಶಿಖರ್ ಧವನ್, ಇದು ಎಷ್ಟು ಭಯಾನಕವಾಗಿದೆಯೆಂದರೆ, ಕೇರಳದಲ್ಲಿ ನಾಯಿಗಳ ಸಾಮೂಹಿಕ ಹತ್ಯೆ ನಡೆಯುತ್ತಿದೆ. ಅಂತಹ ಕ್ರಮಗಳನ್ನು ಮರುಪರಿಶೀಲಿಸಲು ಮತ್ತು ಈ ಕ್ರೂರ ಹತ್ಯೆಗಳನ್ನು ಕೊನೆಗೊಳಿಸಲು ನಾನು ವಿನಂತಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಕಳೆದ ಬಾರಿ ನೀವು ನಿಮ್ಮ ಮಕ್ಕಳೊಂದಿಗೆ ಯಾವಾಗ ಬೀದಿಗೆ ಬಂದಿರಿ? ನಾಯಿ ಕಡಿತದಿಂದಾಗಿ ನೀವು ಯಾವುದೇ ಮಗುವನ್ನು ಕಳೆದುಕೊಂಡಿದ್ದೀರಾ? ಮಾನವರಿಗೆ ಮಾನವೀಯತೆ ಮೊದಲು ಎಂದು ಧವನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದ ಏಳು ತಿಂಗಳಲ್ಲಿ ಕೇರಳ ರಾಜ್ಯದಲ್ಲಿ ಬೀದಿನಾಯಿ ಕಡಿತದ ಘಟನೆಗಳು ಹೆಚ್ಚುತ್ತಿವೆ. ಬೀದಿನಾಯಿ ಕಚ್ಚಿ ಸುಮಾರು ಎರಡು ಲಕ್ಷ ಮಂದಿ ಚಿಕಿತ್ಸೆ ಪಡೆದಿದ್ದಾರೆ. ಇದನ್ನು ತಡೆಗಟ್ಟಲು ಸರಕಾರದ ವಿಳಂಬಿಸಿದರಿಂದ ಸಾರ್ವಜನಿಕರು ತಮ್ಮನ್ನು ರಕ್ಷಿಸಿಕೊಳ್ಳಲು ಬೀದಿ ನಾಯಿಗಳನ್ನು ಕೊಲ್ಲುತ್ತಿದ್ದಾರೆ.
ಇತ್ತೀಚೆಗೆ ಕೋಝಿಕ್ಕೋಡ್ ಮೇಯರ್ ಬೀನಾ ಫಿಲಿಪ್, ಈ ಪರಿಸ್ಥಿತಿಯಲ್ಲಿ ಜನರು ತಮ್ಮ ಮಕ್ಕಳು ಗಂಭೀರ ಅಪಾಯದಲ್ಲಿರುವುದರಿಂದ ಅವರನ್ನು ದೂಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ನಮ್ಮ ಸ್ವಂತ ಮಕ್ಕಳ ಮೇಲೆ ನಾಯಿಗಳು ಈ ರೀತಿ ದಾಳಿ ಮಾಡಿದಾಗ, ಜನರು ಈ ರೀತಿ ಪ್ರತಿಕ್ರಿಯಿಸಿದರೆ, ಅವರನ್ನು ದೂಷಿಸಲಾಗುವುದಿಲ್ಲ. ನಾನು ನಾಯಿಗಳನ್ನು ಕೊಲ್ಲುವ ಪರವಾಗಿಲ್ಲ ಅಥವಾ ಅದನ್ನು ಸಮರ್ಥಿಸುವುದಿಲ್ಲ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ, ನಾನು ಜನರನ್ನು ದೂಷಿಸಲು ಸಾಧ್ಯವಿಲ್ಲ ಎಂದು ಬೀನಾ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಎಲ್ಲಾ ಘಟನೆಗಳಿಗೆ ಪ್ರತಿಕ್ರಿಯಿಸಿರುವ ಕೇರಳ ಸರ್ಕಾರ ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 20 ರವರೆಗೆ ಎಲ್ಲಾ ಬೀದಿ ನಾಯಿಗಳಿಗೆ ರಾಜ್ಯವ್ಯಾಪಿ ಸಾಮೂಹಿಕ ಲಸಿಕಾ ಅಭಿಯಾನಕ್ಕೆ ಆದೇಶಿಸಿದೆ. ಅಲ್ಲದೆ, ಅನೇಕ ಸ್ವಯಂಸೇವಾ ಸಂಸ್ಥೆಗಳು ಸಹ ಲಸಿಕೆ ಅಭಿಯಾನಗಳನ್ನು ಆಯೋಜಿಸುತ್ತಿವೆ.
ನಾಯಿಗಳನ್ನು ಕೊಲ್ಲುವುದರಿಂದ ಬೀದಿನಾಯಿ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು, ಸರ್ಕಾರವು ಜಾರಿಗೆ ತಂದ ವೈಜ್ಞಾನಿಕ ಪರಿಹಾರಕ್ಕೆ ಸಾರ್ವಜನಿಕರ ಬೆಂಬಲದ ಅಗತ್ಯವಿದೆ. ಈ ಬಿಕ್ಕಟ್ಟನ್ನು ಪರಿಹರಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ” ಎಂದು ಸಿಎಂ ಪಿಣರಾಯ್ ವಿಜಯನ್ ಹೇಳಿದ್ದಾರೆ.