ಲಾಲೂ ಪ್ರಸಾದ್ ಯಾದವ್ ಗೆ ಪಾಸ್ ಪೋರ್ಟ್ ಹಿಂದಿರುಗಿಸುವಂತೆ ನ್ಯಾಯಾಲಯ ಆದೇಶ

Prasthutha|

ಪಾಟ್ನ: ಮೇವು ಹಗರಣದ ಐದು ಪ್ರಕರಣಗಳಲ್ಲಿ ಶಿಕ್ಷೆಗೀಡಾಗಿರುವ ರಾಷ್ಟ್ರೀಯ ಜನತಾ ದಳದ ವರಿಷ್ಠ ಲಾಲೂ ಪ್ರಸಾದ್ ಯಾದವ್ ಅವರಿಗೆ ಅವರ ಪಾಸ್ ಪೋರ್ಟ್ ಹಿಂದಿರುಗಿಸುವಂತೆ ಕೇಂದ್ರೀಯ ತನಿಖಾ ದಳ- ಸಿಬಿಐ ವಿಶೇಷ ನ್ಯಾಯಾಲಯವು ಆದೇಶಿಸಿದೆ.

- Advertisement -

ಸಿಬಿಐ ನ್ಯಾಯಾಧೀಶ ದಿನೇಶ್ ರಾಯ್ ಅವರು ಈ ಆದೇಶ ನೀಡಿದರು.

ಸೆಪ್ಟೆಂಬರ್ 13ರಂದು ಲಾಲೂ ಪ್ರಸಾದ್ ಅವರು ಪಾಸ್ ಪೋರ್ಟ್ ಹಿಂದಿರುಗಿಸುವಂತೆ ಅರ್ಜಿ ಸಲ್ಲಿಸಿದ್ದರು.

- Advertisement -

ಲಾಲೂರ ಅರ್ಜಿಯ ಬಗ್ಗೆ ಅವರ ವಕೀಲರು “ಸಿಂಗಾಪುರದ ವೈದ್ಯರು ಸೆಪ್ಟೆಂಬರ್  24ರ ದಿನಾಂಕ ನೀಡಿದ್ದು, ಹಾಗಾಗಿ ಅವರು ಅಷ್ಟರೊಳಗೆ ಅಲ್ಲಿಗೆ ತಪಾಸಣೆಗೆ ತಲುಪಬೇಕಾಗಿದೆ” ಎಂದು ಹೇಳಿದರು. ಆದ್ದರಿಂದ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಲಾಲೂರ ಪಾಸ್ ಪೋರ್ಟ್ ಹಿಂದಿರುಗಿಸುವಂತೆ ಅವರು ಕೇಳಿದರು. ಅದರ ಜೊತೆಗೆ ಸಿಂಗಾಪುರಕ್ಕೆ ಹೋಗುವುದರಿಂದ ಕನಿಷ್ಠ ಎರಡು ತಿಂಗಳ ಅವಧಿಗಾದರೂ ಪಾಸ್ ಪೋರ್ಟ್ ನೀಡಬೇಕು ಎಂದು ಸಹ ಲಾಲೂ ಅವರ ವಕೀಲರಾದ ಪ್ರಭಾತ್ ಕುಮಾರ್ ಮನವಿ ಮಾಡಿದರು.

1996ರಲ್ಲಿ 900 ಕೋಟಿ ರೂಪಾಯಿಗಳ ಮೇವು ಹಗರಣ ಬೆಳಕಿಗೆ ಬಂದಿತ್ತು. ಈ ಹಗರಣಕ್ಕೆ ಸಂಬಂಧಿಸಿದಂತೆ ಆರು ಮೊಕದ್ದಮೆಗಳು ಇವೆ. ಅದರ ಒಂದು ಪ್ರಕರಣದಲ್ಲಿ ಲಾಲೂ ಅವರಿಗೆ 2013ರಲ್ಲಿ 5 ವರ್ಷಗಳ ಜೈಲು ಶಿಕ್ಷೆ ಆಗಿದೆ. ಹಾಗಾಗಿ ಅವರು ರಾಜಕೀಯದ ಸ್ಪರ್ಧಾ ಕಣದಿಂದ ದೂರ ಉಳಿಯಬೇಕಾಯಿತು. ಲಾಲೂ ಪ್ರಸಾದ್ ಅವರು ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗ ಜಾಮೀನಿನ ಮೇಲೆ ಹೊರಗಿದ್ದಾರೆ.

ಲಾಲೂ ಪ್ರಸಾದ್ ಯಾದವ್  ಎಲ್ಲ ಆರೂ ಮೊಕದ್ದಮೆಗಳನ್ನು ಒಗ್ಗೂಡಿಸಿ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದರು. ಆದರೆ ಸುಪ್ರೀಂ ಕೋರ್ಟು ಅವರ ಮನವಿಯನ್ನು ಪುರಸ್ಕರಿಸಿಲ್ಲ. ಆರೂ ಪ್ರಕರಣಗಳು ಪ್ರಪ್ರತ್ಯೇಕವಾಗಿ ವಿಚಾರಣೆಯಾಗಬೇಕು ಎಂದು ಆಜ್ಞಾಪಿಸಿತ್ತು.

Join Whatsapp