ಮುಂಬೈ: ಎರಡನೇ ಪತ್ನಿಯನ್ನು ಸುಟ್ಟುಹಾಕಿ, ಸಾಕ್ಷ್ಯವನ್ನು ನಾಶಪಡಿಸಲು ಆಕೆಯ ಚಿತಾಭಸ್ಮವನ್ನು ಸಮುದ್ರದಲ್ಲಿ ಎಸೆದ ಆರೋಪದ ಮೇಲೆ ಶಿವಸೇನಾ ಮುಖಂಡನನ್ನು ಬಂಧಿಸಲಾಗಿದೆ.
ರತ್ನಗಿರಿ ಮೂಲದ ಸುಕಾಂತ್ ಸಾವಂತ್ ಅಲಿಯಾಸ್ ಭಾಯ್ ಸಾವಂತ್ (47) ಆರೋಪಿ. ಆತನ ಇಬ್ಬರು ಸಹಚರರಾದ ರೂಪೇಶ್ ಅಲಿಯಾಸ್ ಛೋಟಾ ಸಾವಂತ್ (43) ಮತ್ತು ಪ್ರಮೋದ್ ಅಲಿಯಾಸ್ ಪಾಮ್ಯ ಗವ್ನಾಂಗ್ (33) ಅವರನ್ನೂ ಕೊಲೆ, ಸಾಕ್ಷ್ಯ ನಾಶ ಮತ್ತು ಐಪಿಸಿ ಅಡಿಯಲ್ಲಿ ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಬಂಧಿಸಲಾಗಿದೆ. ಈ ಮೂವರನ್ನು ಸೆಪ್ಟೆಂಬರ್ 19 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಮೃತ ಮಹಿಳೆ ಸ್ವಪ್ನಾಲಿ (35) ರತ್ನಗಿರಿ ಪಂಚಾಯತ್ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದರು. ಕೌಟುಂಬಿಕ ಕಲಹದ ಕಾರಣದಿಂದ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಣೇಶ ಚತುರ್ಥಿಯ (ಆಗಸ್ಟ್ 31) ರಾತ್ರಿ ಸುಕಾಂತ್ ಮಾಲೀಕತ್ವದ ಕಟ್ಟಡದ ಒಳಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಸಾಕ್ಷ್ಯವನ್ನು ನಾಶಪಡಿಸಲು ಆಕೆಯ ಚಿತಾಭಸ್ಮವನ್ನು ಸಮುದ್ರಕ್ಕೆ ಎಸೆದಿದ್ದಾರೆ. ನಂತರ ಆರೋಪಿ ಸುಕಾಂತ್ ಮುಗ್ದನಂತೆ ನಟಿಸಿ ಪತ್ನಿ ಕಾಣೆಯಾದ ಬಗ್ಗೆ ದೂರನ್ನೂ ನೀಡಿದ್ದ ಎಂದು ಎಂದು ರತ್ನಗಿರಿ ಎಸ್ಪಿ ಮೋಹಿತ್ ಕುಮಾರ್ ಗರ್ಗ್ ಹೇಳಿದ್ದಾರೆ.
ಸೆಪ್ಟೆಂಬರ್ 10 ರಂದು, ಸ್ವಪ್ನಾಲಿ ಅವರ ತಾಯಿ ಸಂಗೀತಾ ಶಿರ್ಕೆ (64) ಅವರು ಅಳಿಯನನ್ನು ಭೇಟಿಯಾಗಿ ತನ್ನ ಮಗಳು ಕಾಣೆಯಾದ ಬಗ್ಗೆ ಅಳಿಯನೊಂದಿಗೆ ಜಗಳವಾಡಿದ್ದಳು. ಆಗ ಸ್ವಪ್ನಾಲಿಯನ್ನು ಕೊಂದಿರುವುದಾಗಿ ಸುಕಾಂತ್ ಬಾಯ್ಬಿಟ್ಟಿದ್ದ. ನಂತರ ಸಂಗೀತಾ ಪೊಲೀಸರಿಗೆ ದೂರು ನೀಡಿದ್ದು, ಸುಕಾಂತ್ ಹಾಗೂ ಇತರ ಇಬ್ಬರನ್ನು ಬಂಧಿಸಲಾಗಿದೆ. ಅಪರಾಧ ಸ್ಥಳದಿಂದ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಎಸ್ಪಿ ಹೇಳಿದರು.