ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಮಾಜಿ ಸೈನಿಕರಿಂದ ಫ್ರೀಡಂ ಪಾರ್ಕ್ ನಲ್ಲಿ ಅಹೋರಾತ್ರಿ ಸತ್ಯಾಗ್ರಹ

Prasthutha|

ಬೆಂಗಳೂರು: ಸರ್ಕಾರದಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾಜಿ ಸೈನಿಕರು ಪ್ರತಿಭಟನಾ ಮಾರ್ಗ ಹಿಡಿದಿದ್ದು, ನಗರದ ಫ್ರೀಡಂ ಪಾರ್ಕ್ ನಲ್ಲಿ ಅಹೋರಾತ್ರಿ ಸತ್ಯಾಗ್ರಹದಲ್ಲಿ ತೊಡಗಿದ್ದಾರೆ.

- Advertisement -

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ, ಎಲ್ಲಾ ಮಾಜಿ ಸೈನಿಕ ಸಂಘಟನೆಗಳು, ಮಾಜಿ ಮತ್ತು ಹಾಲಿ ಸೈನಿಕರ ಪತ್ನಿಯರು, ವೀರನಾರಿಯ ಸಂಘಟನೆ ಸಹಯೋಗದೊಂದಿಗೆ ಅಹೋ ರಾತ್ರಿ ಧರಣಿ ಸತ್ಯಾಗ್ರಹದಲ್ಲಿ ನಿರತರಾಗಿದ್ದಾರೆ.

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಶಿವಣ್ಣ ಎಸ್.ಕೆ. ಮತ್ತು ಗೌರವಾಧ್ಯಕ್ಷ ಆನಂದ್, ಪ್ರಧಾನ ಕಾರ್ಯದರ್ಶಿ ವಿ.ಆರ್.ರಮೇಶ್, ಖಜಾಂಚಿ ಜಯಕುಮಾರ್ ಮತ್ತಿತರ ಪದಾಧಿಕಾರಿಗಳು ಸೇರಿ 3000 ಕ್ಕೂ ಹೆಚ್ಚು ಮಂದಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.

- Advertisement -

ಕಂದಾಯ ಸಚಿವ ಆರ್.ಅಶೋಕ್ , ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಶಾಸಕ ಅಪ್ಪಚ್ಚು ರಂಜನ್ ಸ್ಥಳಕ್ಕೆ ಆಗಮಿಸಿ, ಮಾಜಿ ಸೈನಿಕರ ಸಂಘದ ಬೇಡಿಕೆಗಳ ಕುರಿತಾದ ಮನವಿ ಪತ್ರ ಸ್ವೀಕರಿಸಿದರು.
ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಥಳಕ್ಕೆ ಬಂದು ನಮ್ಮ ಬೇಡಿಕೆಗಳನ್ನು ಈಡೇರಿಸದ ಹೊರತು ಅಹೋರಾತ್ರಿ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ಬೇಡಿಕೆಗಳು:

1969ರ ಭೂ ಕಾಯ್ದೆ ಪ್ರಕಾರ ಭೂಮಿ ಹಂಚಿಕೆ, ಮಾಜಿ ಸೈನಿಕ ಕೋಟಾದಲ್ಲಿ ನೀಡುವ ಉದ್ಯೋಗ ಅವಕಾಶಕ್ಕೆ ತಿದ್ದುಪಡಿ ತರುವ ಜೊತೆಗೆ ಮಾಜಿ ಸೈನಿಕರ ಮಕ್ಕಳಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕದಲ್ಲಿ ವಿನಾಯಿತಿ. ಮಾಜಿ ಸೈನಿಕರ ಕೋಟಾದಡಿ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ, ಮಾಜಿ ಸೈನಿಕರ ಕೋಟಾದಡಿ ಸರ್ಕಾರಿ ಹುದ್ದೆ ಸೇರಿರುವ ನೌಕರರಿಗೆ ವೇತನ ಪರಿಷ್ಕರಣೆಗೆ ಸಮಿತಿ ರಚನೆ, ಮಾಜಿ ಸೈನಿಕರಿಗಾಗಿಯೇ ಪ್ರತ್ಯೇಕ ನಿಗಮ ಮತ್ತು ಮಂಡಳಿ ರಚನೆ, ಸರ್ಕಾರ ನೀಡುವ ಪ್ರಶಸ್ತಿಗಳಲ್ಲಿ ಮಾಜಿ ಸೈನಿಕರನ್ನು ಪರಿಗಣಿಸುವ ಜೊತೆಗೆ ಮಾಜಿ ಸೈನಿಕರಿಗೆ ಉಚಿತವಾಗಿ ನಿವೇಶನ ಮತ್ತು ಮನೆ ಹಂಚಿಕೆ ಮಾಡಬೇಕು ಎಂದು ಹೇಳಿದ್ದಾರೆ.

ಸರ್ಕಾರದ ನಾಮನಿರ್ದೇಶನಗಳಲ್ಲಿ ಅವಕಾಶ ಕಲ್ಪಿಸುವ, ಮಾಜಿ ಸೈನಿಕರಿಗೆ ಹೆದ್ದಾರಿ ಟೋಲ್‌ಗಳಲ್ಲಿ ಉಚಿತ ಸಂಚಾರಕ್ಕೆ ಅವಕಾಶ ಕಲ್ಪಿಸುವ, ಪ್ರತಿ ಜಿಲ್ಲೆಯಲ್ಲೂ ಸೈನಿಕ ಭವನ ನಿರ್ಮಾಣ, ಪ್ರತಿ ಜಿಲ್ಲೆಯಲ್ಲೂ ಯುದ್ಧ ಸ್ಮಾರಕ, ಅಮರ್ ಜವಾನ್ ನಿರ್ಮಿಸುವ ಜೊತೆಗೆ ಮಾಜಿ ಸೈನಿಕ ನಿಧನದ ನಂತರ ಪತ್ನಿಗೆ ಜಮೀನು/ನಿವೇಶನ ಮತ್ತು ಸರ್ಕಾರದಿಂದ ಹೆಚ್ಚಿನ ಸವಲುತ್ತುಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.



Join Whatsapp