ಚುನಾವಣೆ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದ ಜನತೆಗೆ ಮತ್ತಷ್ಟು ಕೊಡುಗೆಗಳು
ಶಿಮ್ಲಾ/ ಹಿಮಾಚಲಪ್ರದೇಶ: ಹಿಮಾಚಲ ಪ್ರದೇಶದಲ್ಲಿ 6 ಲಕ್ಷ ಸರಕಾರಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಆಮ್ ಆದ್ಮಿ ಪಕ್ಷವು ಶುಕ್ರವಾರ ಭರವಸೆ ನೀಡಿದ್ದು, ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ಕೆಲಸ ಸಿಗುವವರೆಗೆ ನಿರುದ್ಯೋಗಿಗಳಿಗೆ ತಿಂಗಳಿಗೆ 3,000 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದು ಹೇಳಿದೆ.
ರಾಜ್ಯದಲ್ಲಿ “ಇನ್ಸ್‌ಪೆಕ್ಟರ್ ರಾಜ್” ಮತ್ತು “ರಾಜಕೀಯ ಭ್ರಷ್ಟಾಚಾರ” ಕೊನೆಗೊಳಿಸಲು ವ್ಯಾಪಾರಿಗಳು ಮತ್ತು ಪ್ರವಾಸೋದ್ಯಮಕ್ಕಾಗಿ ಸಮಾಲೋಚನಾ ಮಂಡಳಿಯನ್ನು ರಚಿಸಲಾಗುವುದು ಎಂದು ಪಕ್ಷ ಹೇಳಿದೆ.
ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರ ತವರು ಜಿಲ್ಲೆ ಮಂಡಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಈ ಘೋಷಣೆ ಮಾಡಿದ್ದಾರೆ.
ಎಎಪಿಯು ಹಿರಿಯ ನಾಗರಿಕರಿಗೆ ಅವರ ಆಯ್ಕೆಯ ಧಾರ್ಮಿಕ ಸ್ಥಳಗಳಿಗೆ ಉಚಿತ ತೀರ್ಥಯಾತ್ರೆಯ ಭರವಸೆಯನ್ನೂ ನೀಡಿದೆ. ದೆಹಲಿಯ ಮಾದರಿಯಲ್ಲಿ ಹಿಮಾಚಲ ಪ್ರದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸಲಾಗುವುದು ಎಂದು ಪಕ್ಷ ಹೇಳಿದೆ.
ಪ್ರತಿ ಪಂಚಾಯತ್‌ನ ಅಭಿವೃದ್ಧಿಗೆ 10 ಲಕ್ಷ ಅನುದಾನ ನೀಡುವುದಾಗಿ ಹಾಗೂ ಪಂಚಾಯತ್ ಅಧ್ಯಕ್ಷರಿಗೆ ಮಾಸಿಕ 10 ಸಾವಿರ ವೇತನ ನೀಡುವುದಾಗಿ ಎಎಪಿ ಮುಖಂಡರು ಭರವಸೆ ನೀಡಿದ್ದಲ್ಲದೇ, ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಕೀಟನಾಶಕಗಳು, ರಸಗೊಬ್ಬರಗಳು ಹಾಗೂ ಬೀಜಗಳ ಮೇಲೆ ಸಬ್ಸಿಡಿಯನ್ನು ಖಾತರಿಪಡಿಸಲಾಗುವುದು ಎಂದು ಮುಖಂಡರು ಹೇಳಿದ್ದಾರೆ.