ಜೆರುಸಲೇಂ: ಫೆಲೆಸ್ತೀನ್-ಅಮೆರಿಕನ್ ಅಲ್ ಜಝೀರಾ ವರದಿಗಾರ್ತಿ ಶಿರೀನ್ ಅಬು ಅಕ್ಲೆಹ್ ಅವರನ್ನು ಉಗ್ರಗಾಮಿ ಎಂದು ತಪ್ಪಾಗಿ ಅರ್ಥೈಸಿಕೊಂಡು ತಮ್ಮ ಸೈನಿಕರು ಗುಂಡಿಕ್ಕಿ ಕೊಂದಿರಬಹುದು ಎಂದು ಇಸ್ರೇಲ್ ಸೇನೆ ಸೋಮವಾರ ಮೊದಲ ಬಾರಿಗೆ ಒಪ್ಪಿಕೊಂಡಿದೆ.
ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲಿ ಮಿಲಿಟರಿ ದಾಳಿಗಳನ್ನು ವರದಿ ಮಾಡುವಾಗ ಶಿರೀನ್ ಅಬು ಅಕ್ಲೆಹ್ ಅವರನ್ನು ಮೇ ತಿಂಗಳಲ್ಲಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೆ ಇಸ್ರೇಲ್ ಕಾರಣ ಎಂದು ಫೆಲೆಸ್ತೀನಿಯರು ಆರೋಪಿಸಿದ್ದರು. ಆರಂಭದಲ್ಲಿ ಇಸ್ರೇಲ್ ಉಗ್ರಗಾಮಿಗಳ ಗುಂಡಿನ ದಾಳಿಯಲ್ಲಿ ಆಕೆ ಮೃತಪಟ್ಟಿರಬಹುದು ಎಂದು ಹೇಳಿತ್ತು, ಆದರೆ ನಂತರ ಗುಂಡಿನ ಚಕಮಕಿಯ ಸಮಯದಲ್ಲಿ ತನ್ನ ಸೈನಿಕರಲ್ಲಿ ಒಬ್ಬರು ಗುಂಡಿಕ್ಕಿ ಕೊಂದಿರಬಹುದು ಎಂದು ಹೇಳಿದೆ.
ಪ್ಯಾಲೆಸ್ತೀನ್-ಅಮೆರಿಕನ್ ಪತ್ರಕರ್ತೆ ಅಬು ಅಕ್ಲೆಹ್, ಎರಡು ದಶಕಗಳ ಕಾಲ ಅಲ್ ಜಝೀರಾ ವಾಹಿನಿಗಾಗಿ ಇಸ್ರೇಲಿ ಮಿಲಿಟರಿ ದಾಳಿಗಳ ಕುರಿತು ವರದಿ ಮಾಡಿದ್ದರು.