ದಿಯೋಘರ್: ನಿಯಮ ಉಲ್ಲಂಘಿಸಿ ವಿಮಾನ ನಿಲ್ದಾಣ ಪ್ರವೇಶಿಸಿ ತಕ್ಷಣ ವಿಮಾನ ಹೊರಡಿಸುವಂತೆ ಗದ್ದಲವೆಬ್ಬಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಸಂಸದರಾದ ನಿಶಿಕಾಂತ್ ದುಬೆ, ಮನೋಜ್ ತಿವಾರಿ ಸಹಿತ 9 ಜನರ ಮೇಲೆ ಎಫ್ ಐಆರ್ ದಾಖಲಾಗಿದೆ.
ಜಾರ್ಖಂಡದಲ್ಲಿ ವಿಮಾನ ನಿಲ್ದಾಣದ ಡಿಎಸ್ ಪಿ ಆಗಿರುವ ಸುಮನ್ ಅನಾನ್ ಅವರು ನೀಡಿದ ದೂರಿನನ್ವಯ ಈ ಎಫ್ ಐಆರ್ ದಾಖಲಾಗಿದೆ.
ಗೊಡ್ಡಾದ ಸಂಸದರಾದ ನಿಶಿಕಾಂತ್ ದುಬೆ, ಅವರ ಮಗ ಕನಿಷ್ಕ್ ಕಾಂತ್ ದುಬೆ, ಮಹಿಕಾಂತ್ ದುಬೆ, ಸಂಸದ ಮನೋಜ್ ತಿವಾರಿ, ಮುಕೇಶ್ ಪಾಠಕ್, ದೇವ್ತಾ ಪಾಂಡೆ, ಪಿಂಟು ತಿವಾರಿ ಅವರು ಆಗಸ್ಟ್ 31ರ ರಾತ್ರಿ ವಿಮಾನ ನಿಲ್ದಾಣಕ್ಕೆ ನುಗ್ಗಿ ತಾವೇರಿದ ವಿಮಾನ ಕೂಡಲೆ ಹೊರಡಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂದು ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ.
ಹೊಸದಾಗಿ ಆರಂಭವಾಗಿರುವ ದೇವಗಡ ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನ ಸಂಚಾರಕ್ಕೆ ಇನ್ನೂ ಅನುಮತಿ ಇರಲಿಲ್ಲ. ಕತ್ತಲಾಗುವುದಕ್ಕೆ ಅರ್ಧ ಗಂಟೆ ಮೊದಲೇ ನಿಲ್ದಾಣ ಮುಚ್ಚಲಾಗುತ್ತದೆ. ಆದರೆ ಬಿಜೆಪಿ ಮುಖಂಡರು 6.17 ಗಂಟೆಗೆ ನುಗ್ಗಿ ಬಂದು ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
“ವಿಮಾನ ನಿಲ್ದಾಣಗಳ ಪ್ರಾಧಿಕಾರವು ಪ್ರತಿಬಂಧಿಸಿಲ್ಲ. ನಾವು ನಿಲ್ದಾಣದ ನಿರ್ದೇಶಕರಿಂದ ಅನುಮತಿ ಪಡೆದೆವು. ನಾವು ನಮ್ಮ ವಾದ ಮುಂದಿಟ್ಟು ಹೋರಾಡುವುದಾಗಿ” ನಿಶಿಕಾಂತ್ ದುಬೆ ಹೇಳಿದ್ದಾರೆ.
ದೇವಗಡ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಂಜುನಾಥ ಭಜಂತ್ರಿಯವರು ‘ರಾಷ್ಟ್ರೀಯ ಭದ್ರತೆಯನ್ನು ಮುರಿದಿದ್ದಾರೆ’ ಎಂದು ಹೇಳಿದ್ದಾರೆ. ಇದರ ವಿರುದ್ಧ ಶುಕ್ರವಾರ ರಾತ್ರಿ ಸಂಸದ ದುಬೆ ಟ್ವಿಟರ್ ನಲ್ಲಿ ಹರಿಹಾಯ್ದಿದ್ದಾರೆ. ಯಾವುದೇ ನಿಯಮಿತ ರಕ್ಷಣಾ ನಿಯಮಾವಳಿ ಮುರಿಯುವುದು ಅಪರಾಧ ಎಂದು ಭಜಂತ್ರಿ ಟ್ವೀಟ್ ಮಾಡಿದ್ದಾರೆ.