ಮಂಗಳೂರು: ಇಲ್ಲಿನ ಕಲ್ಲಾಪು ಮಾರುಕಟ್ಟೆಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ.
ಮೃತರನ್ನು ಬೆಂಗರೆ ನಿವಾಸಿ, ಪ್ರಸ್ತುತ ಕಲ್ಲಾಪುನಲ್ಲಿ ನೆಲೆಸಿರುವ ಬೆಂಗರೆ ನಿಯಾಝ್ ಬಾವಾ ( 40) ಎಂದು ಗುರುತಿಸಲಾಗಿದೆ.
ನಿಯಾಝ್ ಅವರು ಕಲ್ಲಾಪು ಮಾರುಕಟ್ಟೆಯಲ್ಲಿ ಕೆಎಂ ಫಾರೂಕ್ ಎಂಬವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಇಂದು ಬೆಳಗ್ಗಿನ ಜಾವ 4.10ರ ಸುಮಾರಿಗೆ ಕಲ್ಲಾಪುವಿನಲ್ಲಿರುವ ಮನೆಯಿಂದ ನಡೆದುಕೊಂಡು ಹೋಗುತ್ತಿದ್ದಾಗ ಕೇರಳದಿಂದ ಮಂಗಳೂರಿಗೆ ಬರುತ್ತಿದ್ದ ಲಾರಿಯೊಂದು ವೇಗವಾಗಿ ಬಂದು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಲಾರಿಯ ಟೈಯರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ, ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಪಘಾತದ ಬಳಿಕ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದು, ಕ್ಲೀನರ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನಿಯಾಝ್ ಮೂಲತಃ ಬೆಂಗರೆ ನಿವಾಸಿಯಾಗಿದ್ದು, ಇತ್ತೀಚಿಗಷ್ಟೇ ಕಲ್ಲಾಪುವಿನ ಬಾಡಿಗೆ ಮನೆಗೆ ಬಂದು ನೆಲೆಸಿದ್ದರು. ಅವರು ಇಬ್ಬರು ಹೆಣ್ಣು ಮಕ್ಕಳು, ಒಂದು ಗಂಡು ಮಗುವನ್ನು ಅಗಲಿದ್ದಾರೆ.
ಮೃತದೇಹವನ್ನು ವೆನ್ ಲಾಕ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಬೆಂಗರೆಗೆ ಕೊಂಡೊಯ್ಯಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರು ತಂದೆ, ತಾಯಿ, ಪತ್ನಿ, ಮಕ್ಕಳು ಮತ್ತು 6 ಮಂದಿ ಸಹೋದರರು, ಇಬ್ಬರು ಸಹೋದರಿಯರು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತದೇಹದ ಅಂತ್ಯಸಂಸ್ಕಾರ ಬೆಂಗರೆ ಖರಬಸ್ತಾನದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.