ಸುಪ್ರೀಂ ಆದೇಶವಿದ್ದರೂ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ತಡೆ ಹೇರಿರುವ ವಿವಿಧ ಇಲಾಖೆಗಳು

Prasthutha|

ಉತ್ತರ ಪ್ರದೇಶ: ಅಯೋಧ್ಯೆಯಲ್ಲಿ ಮಸೀದಿಯೊಂದನ್ನು ನಿರ್ಮಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿ ಸುಮಾರು ಮೂರು ವರ್ಷಗಳು ಕಳೆದಿವೆ. ಆದರೆ ಅಗ್ನಿಶಾಮಕ ಸೇವೆಗಳು, ಮಾಲಿನ್ಯ ಮಂಡಳಿ ಮತ್ತು ನಾಗರಿಕ ಪ್ರಾಧಿಕಾರಗಳು ನಿರಾಕ್ಷೇಪಣಾ ಪತ್ರಗಳು (NOC) ನೀಡದೆ ಮಸೀದಿ ನಿರ್ಮಾಣಕ್ಕೆ ತಡೆ ಹೇರಿದೆ.

- Advertisement -

ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಗೆ ಮಸೀದಿ ನಿರ್ಮಾಣಕ್ಕಾಗಿ ಧನ್ನಿಪುರ ಗ್ರಾಮದಲ್ಲಿ ಐದು ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು. ವಕ್ಫ್ ಮಂಡಳಿಯು ಮಸೀದಿ, ಆಸ್ಪತ್ರೆ ಮತ್ತು ವಸ್ತುಸಂಗ್ರಹಾಲಯ ಸಹಿತ ಅಲ್ಲಿ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಎಂಬ ಟ್ರಸ್ಟನ್ನು ನಿರ್ಮಿಸಲು ಉದ್ದೇಶಿಸಿತ್ತು. ಆದರೆ ಇನ್ನೂ ಕೆಲಸವೇ ಪ್ರಾರಂಭ ಮಾಡಲು ವಿವಿಧ ಇಲಾಖೆಗಳು ಸಮ್ಮತಿ ನೀಡಿಲ್ಲ.

ಈ ಬಗ್ಗೆ ಐಐಸಿಎಫ್ ಕಾರ್ಯದರ್ಶಿ ಅಥರ್ ಹುಸೇನ್ ಸಿದ್ದಿಕಿ ಮಾತನಾಡಿ, ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಜುಲೈ 15 ರಂದು ಅಗ್ನಿಶಾಮಕ ಸೇವೆಗಳು, ನಾಗರಿಕ ವಿಮಾನಯಾನ, ಅಯೋಧ್ಯೆಯ ಮುನ್ಸಿಪಲ್ ಕಾರ್ಪೊರೇಷನ್, ನೀರಾವರಿ, ಪಿಡಬ್ಲ್ಯೂಡಿ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾಡಳಿತ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಸೀದಿ ನಿರ್ಮಾಣಕ್ಕೆ ‘ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು’ ನೀಡುವಂತೆ ಪತ್ರಗಳನ್ನು ನೀಡಿದೆ ಎಂದು ಹೇಳಿದರು.

- Advertisement -

ಅಗ್ನಿಶಾಮಕ ಸೇವೆಗಳನ್ನು ಹೊರತುಪಡಿಸಿ, ಬೇರೆ ಯಾವುದೇ ಇಲಾಖೆ ಸ್ಥಳದಲ್ಲೇ ಪರಿಶೀಲನೆ ನಡೆಸಿಲ್ಲ. ಮತ್ತು, ಸಂಬಂಧಪಟ್ಟ ಯಾವುದೇ ಇಲಾಖೆಗಳು ನಿರಾಕ್ಷೇಪಣಾ ಪ್ರಮಾಣಪತ್ರ’ ನೀಡಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದರು. ಕಿರಿದಾದ ಸಂಪರ್ಕ ರಸ್ತೆಗಳನ್ನು ಉಲ್ಲೇಖಿಸಿ ಅಗ್ನಿಶಾಮಕ ಸೇವೆಗಳ ಇಲಾಖೆ ‘ನಿರಾಕ್ಷೇಪಣಾ ಪ್ರಮಾಣಪತ್ರ’ ನೀಡಲು ನಿರಾಕರಿಸಿದೆ. ಸಂಪರ್ಕ ರಸ್ತೆ 12 ಮೀಟರ್ ಅಗಲವಿರಬೇಕು, ಆದರೆ ಈಗಿರುವ ಎರಡೂ ರಸ್ತೆಗಳು ಆರು ಮೀಟರ್ ಗಿಂತ ಹೆಚ್ಚು ಇರಬಾರದು. ಮುಖ್ಯ ಸಂಪರ್ಕ ರಸ್ತೆಯ ಅಗಲ ಕೇವಲ ನಾಲ್ಕು ಮೀಟರ್ ಮಾತ್ರ ಎಂದು ಅಗ್ನಿಶಾಮಕ ತಿಳಿಸಿದೆ ಎಂದು ಹುಸೇನ್ ಹೇಳಿದರು. ಉತ್ತರ ಪ್ರದೇಶ ಸರ್ಕಾರ ಮತ್ತು ಅಯೋಧ್ಯೆ ಆಡಳಿತವು ಆದಷ್ಟು ಬೇಗ ಅಗಲವಾದ ರಸ್ತೆಯನ್ನು ನಿರ್ಮಿಸುವಂತೆ ಅವರು ವಿನಂತಿಸಿದರು.

ಅಯೋಧ್ಯೆಯ ಮುಖ್ಯ ಅಗ್ನಿಶಾಮಕ ಅಧಿಕಾರಿ ಆರ್.ಕೆ.ರಾಯ್ ಅವರನ್ನು ಸಂಪರ್ಕಿಸಿದಾಗ, ಸಂಪರ್ಕ ರಸ್ತೆಯ ಕಿರಿದಾದ ಅಗಲದಿಂದಾಗಿ, ಅಗ್ನಿ ಶಾಮಕ ಇಲಾಖೆ ಅಯೋಧ್ಯೆ ಮಸೀದಿ ಯೋಜನೆಗೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ತಡೆಹಿಡಿದಿದೆ. 12 ಮೀಟರ್ ಅಗಲದ ಸಂಪರ್ಕ ರಸ್ತೆಗಳಿದ್ದರೆ ಮಾತ್ರ ಅನುಮತಿ ನೀಡಲು ಸಾಧ್ಯ ಎಂದು ನಾವು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಗೆ ಪತ್ರ ಬರೆದಿದ್ದೇವೆ ಎಂದು ಹೇಳಿದ್ದಾರೆ.

Join Whatsapp