ನಾಳೆ ಶಿವಮೊಗ್ಗದಲ್ಲಿ “ಶಾಂತಿ – ಸೌಹಾರ್ದತೆಗಾಗಿ ನಮ್ಮ ನಡಿಗೆ”

Prasthutha|

ಶಿವಮೊಗ್ಗ: ಸ್ವಾತಂತ್ರ್ಯ ದಿನದಂದು ನಡೆದ ಕೋಮುವೈಷಮ್ಯದ ಗಲಾಟೆಗಳಿಂದ ಆತಂಕ, ಅಶಾಂತಿಯ ಭೀತಿಯಲ್ಲಿರುವ ಶಿವಮೊಗ್ಗ ನಗರದಲ್ಲಿ ಸೆ.3 ರಂದು ನಾಗರೀಕ ಸಮುದಾಯವೇ ” ಶಾಂತಿ- ಸೌಹಾರ್ದತೆಗಾಗಿ ನಮ್ಮ ನಡಿಗೆ”  ಎಂಬ ಸದ್ಭಾವನಾ ಜಾಥ ನಡೆಸಲು ನಿರ್ಧರಿಸಿದೆ.

- Advertisement -

ಆ.23 ರಂದು ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ರೈತ ಮುಖಂಡ ಎಚ್ ಆರ್ ಬಸವರಾಜಪ್ಪ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ವಿವಿಧ ಕ್ಷೇತ್ರಗಳ ಮುಖಂಡರ ಸಮಾಲೋಚನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ಕಾರಣಗಳಿಗೂ ಕೋಮು ವೈಷಮ್ಯ ದ ಬಣ್ಣ ಕಟ್ಟಿ ಶಾಂತಿ – ಸೌಹಾರ್ದತೆ ಕದಡುವ ಕೃತ್ಯಗಳು ನಡೆಯುತ್ತಿವೆ. ರಾಜಕೀಯ ದುರುದ್ದೇಶಗಳು ಈ ಘಟನೆಗಳ ಹಿಂದಿದೆ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿರುವುದರಿಂದ ಸಾಹಿತ್ಯಿಕ, ಸಾಂಸ್ಕೃತಿಕ, ವೈಚಾರಿಕ ವಾಗಿ ಘನತೆಯಿಂದಿದ್ದ ಶಿವಮೊಗ್ಗ ಜಿಲ್ಲೆಗೆ ಕಳಂಕ ಮೆತ್ತಿಕೊಳ್ಳುತ್ತಿದೆ. ಅಲ್ಲದೆ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗುತ್ತಿದೆ ಎಂದು ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಆತಂಕ ವ್ಯಕ್ತಪಡಿಸಿದರು.

- Advertisement -

ಧರ್ಮದ್ವೇಷ ಕಾರಣ ನಡೆಯುತ್ತಿರುವ ಇಂತಹ ಘಟನೆಗಳು ಮಕ್ಕಳ ಮನಸ್ಸಿನಲ್ಲಿ ವಿಷವನ್ನು ಬಿತ್ತಿದಂತಾಗುತ್ತಿದೆ. ಇದು ಭವಿಷ್ಯದ ದೃಷ್ಟಿಯಿಂದ ಸಮಾಜಕ್ಕೆ ಒಳ್ಳೆಯದಲ್ಲ. ಇದನ್ನು ತಡೆಗಟ್ಟಬೇಕು. ಸಮಾಜದಲ್ಲಿ ಸೌಹಾರ್ದತೆ ಕದಡುವವರ ಸಂಖ್ಯೆ ಕಡಿಮೆಯಲ್ಲಿದೆ. ದೊಡ್ಡ ಸಂಖ್ಯೆಯಲ್ಲಿ ರುವ ಶಾಂತಿ ಬಯಸುವವರ ಮೌನದಿಂದ ಕಿಡಿಗೇಡಿಗಳ ಅಬ್ಬರ ಹೆಚ್ಚಾಗಿದೆ. ಸಮಾಜದಲ್ಲೂ ಸಹಬಾಳ್ವೆಯನ್ನು ಹಾಳುಗೆಡುವ ಕೃತ್ಯದಲ್ಲಿ ತೊಡಗಿರುವವರು, ಅದಕ್ಕೆ ಪ್ರಚೋದಿಸುವವರು ಯಾರೇ ಆಗಿರಲಿ, ಎಷ್ಟೇ ದೊಡ್ಡವರೇ ಆಗಿರಲಿ ಅವರ ವಿರುದ್ಧ ಜಿಲ್ಲಾಡಳಿತ,ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸುವುದು ಮತ್ತು ಶಾಂತಿ- ಸೌಹಾರ್ದತೆ ಕದಡುವ ಕೆಲವೆ ಕಿಡಿಗೇಡಿಗಳ  ಜೊತೆ ಈ ಸಮಾಜದ ಬಹುಜನರು ಇಲ್ಲ ಎಂಬುದನ್ನು ಸಾರಲು ” ಶಾಂತಿ – ಸೌಹಾರ್ದತೆಯಡೆಗೆ ನಮ್ಮ ನಡಿಗೆ” ಜಾಥದ ಆಶಯವಾಗಲಿ ಎಂದು ಅಭಿಪ್ರಾಯ ಗಳನ್ನು ವ್ಯಕ್ತಪಡಿಸಿದರು.

ಸೆ. 3 ರಂದು ನಡೆಯುವ ಶಾಂತಿ ನಡಿಗೆ ಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ನಾಗರೀಕರು, ಧರ್ಮಾತೀತವಾಗಿ ಭಾಗವಹಿಸಬೇಕು ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲು ನಿರ್ಧರಿಸಲಾಯಿತು.

ಪ್ರಗತಿಪರ ಹೋರಾಟಗಾರ ಕೆ.ಪಿ ಶ್ರೀಪಾಲ್, ಡಿಎಸ್ ಎಸ್ ನ ಗುರುಮೂರ್ತಿ, ವೈದ್ಯರಾದ ಧನಂಜಯ ಸರ್ಜಿ, ಫಾದರ್ ಮೊರಿಸ್, ಪತ್ರಕರ್ತ , ಲೇಖಕ ಎನ್.ರವಿಕುಮಾರ್ ಟೆಲೆಕ್ಸ್, ಜಮಾತೆ ಇಸ್ಲಾಂ ಕಮಿಟಿಯ ಪರ್ವೀಜ್, ವರ್ತಕರ ಸಂಘದ ಎಸ್ ಕೆ ಶೇಷಾಚಲ, ಭರತ್ ಶೆಟ್ಟಿ, ಶಿಕ್ಷಣ ಸಂಸ್ಥೆಗಳ ಪರವಾಗಿ ಕಿರಣ್ ಕುಮಾರ್, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಆರ್ ಎಸ್ ಹಾಲಸ್ವಾಮಿ, ಉದ್ಯಮಿಗಳಾದ ಅಶ್ವಥನಾರಾಯಣಶೆಟ್ಟಿ, ವೆಂಕಟೇಶ್ ಮೂರ್ತಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.



Join Whatsapp