ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಿಸಲು ಅನುಮತಿ ನೀಡಿದ ಹೈಕೋರ್ಟ್

Prasthutha|

ಹುಬ್ಬಳ್ಳಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಿಸಲು ಅನುಮತಿ ನೀಡಿದ ಪಾಲಿಕೆಯ ಆದೇಶ ಪ್ರಶ್ನಿಸಿ ಅಂಜುಂ ಇ ಇಸ್ಲಾಮ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಹುಬ್ಬಳ್ಳಿ-ಧಾರವಾಡ ಪೀಠ ವಜಾಗೊಳಿಸಿದೆ.
ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಅಧಿಕಾರವನ್ನು ಹುಬ್ಬಳ್ಳಿ-ಧಾರವಾರ ಮಹಾನಗರ ಪಾಲಿಕೆ ಆಯುಕ್ತರಿಗೆ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ.

- Advertisement -

ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ಸಂಸ್ಥೆಯು ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಸ್ಥಾಪನೆಗೆ ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅಶೋಕ್‌ ಎಸ್.‌ ಕಿಣಗಿ ಅವರ ನೇತೃತ್ವದ ವಿಶೇಷ ಏಕಸದಸ್ಯ ಪೀಠವು ನಡೆಸಿತು.

“ಆಗಸ್ಟ್‌ 31ರಿಂದ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿಗಳನ್ನು ಸೀಮಿತ ಉದ್ದೇಶಕ್ಕೆ ಪ್ರತಿಷ್ಠಾಪಿಸುವುದಕ್ಕೆ ಸಂಬಂಧಿಸಿದಂತೆ ಮತ್ತು ಸೀಮಿತ ಅವಧಿಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಹಿಂದೂ ಸಂಘಟನೆಗಳು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮನವಿ ನೀಡಿವೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

- Advertisement -

ಮುಂದುವರಿದು, “ಪಾಲಿಕೆಯ ಆಸ್ತಿಯನ್ನು ತಾತ್ಕಾಲಿಕವಾಗಿ ನೀಡುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಶನ್ ಕಾಯಿದೆ 1976 ಸೆಕ್ಷನ್‌ 176ರ ಅಡಿ ಸಂಬಂಧಿತ ಅರ್ಜಿಗಳನ್ನು ವಿಲೇವಾರಿ ಮಾಡಲು ಆಯುಕ್ತರು ಅಧಿಕಾರ ಚಲಾಯಿಸಬಹುದಾಗಿದೆ. ಕಾರ್ಪೊರೇಶನ್‌ ಮೈದಾನದಲ್ಲಿ, ಅಂತ್ಯ ಸಂಸ್ಕಾರ ಪ್ರದೇಶದಲ್ಲಿ ಯಾರೂ ಶಾಶ್ವತ ಪುತ್ಥಳಿ ನಿರ್ಮಿಸುವಂತಿಲ್ಲ. ಮೈದಾನವು ಮುಕ್ತ ಪ್ರದೇಶವಾಗಿದ್ದು, ಈಗಾಗಲೇ ಮೈದಾನ ಬಳಕೆಗೆ ಆಯುಕ್ತರಿಗೆ ಮನವಿಗಳು ಸಲ್ಲಿಕೆಯಾಗಿದ್ದು, ಕಾನೂನಿನ ಅನ್ವಯ ಅರ್ಜಿಗಳನ್ನು ವಿಲೇವಾರಿ ಮಾಡುವ ಸ್ವಾತಂತ್ರ್ಯ ಆಯುಕ್ತರಿಗೆ ಇದೆ. ಪಕ್ಷಕಾರರ ವಾದವನ್ನು ಮುಕ್ತವಾಗಿ ಇರಿಸಲಾಗಿದೆ” ಎಂದು ಪೀಠವು ಆದೇಶದಲ್ಲಿ ಸ್ಪಷ್ಟಪಡಿಸಿದೆ.



Join Whatsapp