ಚಿತ್ರದುರ್ಗ: ಮುರುಘಾ ಮಠದ ಸ್ವಾಮಿ, ತಮ್ಮದೆ ಸಂಸ್ಥೆ ಸಂಚಾಲಿತ ಶಾಲೆ ಮತ್ತು ಹಾಸ್ಟೆಲ್ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಈ ಘಟನೆಯನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಉಗ್ರವಾಗಿ ಖಂಡಿಸಿದೆ.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷರಾದ ಮೀನಾಕ್ಷಿ ಬಾಳಿ ಮಾತಾಡಿ, ಮಹಿಳೆ, ಮಕ್ಕಳೊಂದಿಗೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗಳು ಸಮಾಜದ ದೃಷ್ಟಿಯಲ್ಲಿ ಎಷ್ಟೇ ದೊಡ್ಡವರು ಎನಿಸಿಕೊಂಡಿರಲಿ. ಅವರು ಕೊಳಕು ಕ್ರಿಯೆಯನ್ನು ಸಹಿಸಲಾಗದು. ಈ ದಿಸೆಯಲ್ಲಿ ಸರಕಾರ ಕೂಡಲೇ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಮತ್ತು ಯಾವುದೇ ಪ್ರಭಾವ, ವಶೀಲಿಗೆ ಒಳಗಾಗದೇ ಸತ್ಯವನ್ನು ಹೊರಗೆಳೆಯಬೇಕು ಎಂದು ಒತ್ತಾಯಿಸಿದ್ದಾರೆ.
ಸಾಮಾನ್ಯವಾಗಿ ಸಮಾಜದಲ್ಲಿ ಗಣ್ಯರೆಂದು ಫೋಸ್ ಕೊಡುವ ವ್ಯಕ್ತಿಗಳು ತಾವು ಮಾಡಿದ ಅಪರಾಧಗಳನ್ನು ಮುಚ್ಚಿ ಹಾಕಲು ನೂರು ಒಳದಾರಿಗಳನ್ನು ಬಳಸುತ್ತಾರೆ. ಪ್ರಭುತ್ವದ ಮೇಲೆ ಒತ್ತಡ ಹೇರುತ್ತಾರೆ. ಹಣ ಬಲ, ಜನಬಲ, ರಾಜಕೀಯ ಬಲಗಳನ್ನು ಬಳಸಿ ಅಪರಾಧವು ಸಾಬೀತಾಗದಂತೆ ನೋಡಿಕೊಳ್ಳುವುದುಂಟು. ಈ ಹಿಂದೆಯೂ ಮಠಾಧಿಪತಿಗಳು ನಂಬಿಸಿ,ಬೆದರಿಸಿ ಅತ್ಯಾಚಾರ ನಡೆಸಿದ ಪ್ರಕರಣಗಳು ಬಹಿರಂಗಗೊಂಡಿವೆ.
ಆದ್ದರಿಂದ ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಎಂದು ಸಂಘಟನೆಯ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಯವರ ಮೇಲಿನ ಅತ್ಯಾಚಾರದ ಆರೋಪ ಪ್ರಕರಣದಲ್ಲಿ ಅದು ಸಾಬೀತಾಗಿದೆ. ಆರೋಪ ಹೊತ್ತವರನ್ನು ಕನಿಷ್ಟ ಪ್ರಾಥಮಿಕ ತನಿಖೆಗೂ ಒಳಪಡಿಸದೇ ಇದ್ದಿದ್ದಷ್ಟೇ ಅಲ್ಲದೆ ಕರ್ನಾಟಕದ ಉಚ್ಚನ್ಯಾಯಾಲಯ ತಾಂತ್ರಿಕ ಕಾರಣಗಳನ್ನು ಮುಂದೆ ಮಾಡಿ ಆರೋಪ ಮುಕ್ತಗೊಳಿಸಿದೆ. ನ್ಯಾಯದ ದಾರಿ ಮಹಿಳೆಯರಿಗೆ ದೂರ ಎಂಬುದು ಈ ದೇಶದಲ್ಲಿ ಪ್ರತಿ ಕ್ಷಣ ಸಾಬೀತಾಗುತ್ತಿದೆ.
ಮಹಿಳಾ ಸಂಘಟನೆ ಈ ದಿಸೆಯಲ್ಲಿ ಸಮಾಜದ ವಿದ್ಯಮಾನಗಳನ್ನು ಎಚ್ಚರದಿಂದ ಗಮನಿಸುತ್ತದೆ. ಯಾವುದೇ ಕಾರಣಕ್ಕೂ ಅಪರಾಧಿಗಳು ತಪ್ಪಿಸಿಕೊಳ್ಳದಂತೆ ವಸ್ತುನಿಷ್ಠ ತನಿಖೆ ನಡೆಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಅತ್ಯಾಚಾರದಂಥ ಗಂಭೀರ ಪ್ರಕರಣಗಳಲ್ಲಿ ವಿಳಂಬವು ಸಲ್ಲದು. ಅಪರಾಧಿ ತಪ್ಪಿಸಿಕೊಳ್ಳುವ ಅವಕಾಶ ನೀಡಬಾರದು ಎಂದು ಆಗ್ರಹಿಸುತ್ತೇವೆ ಎಂದು ಹೇಳಿದರು.