ಯುವ ಬ್ಯಾಟ್ಸ್ ಮನ್ ಶುಭ್ ಮನ್ ಗಿಲ್ ದಾಖಲಿಸಿದ ಶತಕದ ನೆರವಿನಿಂದ ಟೀಮ್ ಇಂಡಿಯಾ, ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಜಿಂಬಾಬ್ವೆ ಗೆಲುವಿಗೆ ಸಾವಲಿನ ಗುರಿ ನೀಡಿದೆ.
ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯುತ್ತಿರುವ ಔಪಚಾರಿಕ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, 8 ವಿಕೆಟ್ ನಷ್ಟದಲ್ಲಿ 289 ರನ್ಗಳಿಸಿದೆ. ಈಗಾಗಲೇ 2-0 ಅಂತರದಲ್ಲಿ ಸರಣಿ ಕೈವಶ ಪಡಿಸಿಕೊಂಡಿರುವ ಭಾರತ ಇಂದಿನ ಪಂದ್ಯವನ್ನು ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡುವ ಗುರಿಯಲ್ಲಿದೆ.
ಶುಭ್ ಮನ್ ಗಿಲ್ ಚೊಚ್ಚಲ ಶತಕ
ಮೂರನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಶುಭ್ ಮನ್ ಗಿಲ್ ಭರ್ಜರಿ ಶತಕದ ಮೂಲಕ ಅಬ್ಬರಿಸಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ಗಿಲ್ ಬ್ಯಾಟ್ ನಿಂದ ದಾಖಲಾದ ಚೊಚ್ಚಲ ಶತಕ ಇದಾಗಿದೆ. 82 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದ ಗಿಲ್, ಒಟ್ಟು 97 ಎಸೆತಗಳ ಇನಿಂಗ್ಸ್ ನಲ್ಲಿ 15 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 130 ರನ್ ಗಳಿಸಿ ನಿರ್ಗಮಿಸಿದರು. ಶುಭ್ ಮನ್ ಗೆ ತಕ್ಕ ಸಾಥ್ ನೀಡಿದ ಎಡಗೈ ಬ್ಯಾಟರ್ ಇಶಾನ್ ಕಿಶನ್ 50 ರನ್ಗಳಿಸಿದ್ದ ವೇಳೆ ರನೌಟ್ ಗೆ ಬಲಿಯಾದರು. ಟೀಮ್ ಇಂಡಿಯಾ ಇನ್ನಿಂಗ್ಸ್ ಪರ ಇನ್ನಿಂಗ್ಸ್ ಆರಂಭಿಸಿದ್ದ ಶಿಖರ್ ಧವನ್ (40 ರನ್) ಕೆ.ಎಲ್. ರಾಹುಲ್ 30 ರನ್ ಗಳಿಸಿದರು. ಸಂಜು ಸ್ಯಾಮ್ಸನ್ 115 ರನ್ಗಳಿಸಿದರೆ, ದೀಪಕ್ ಹೂಡಾ, ಅಕ್ಷರ್ ಪಟೇಲ್ ತಲಾ ಒಂದು ರನ್ ಗಳಿಸಿದರು.
ಐದು ವಿಕೆಟ್ ಕಿತ್ತು ಮಿಂಚಿದ ಇವಾನ್ಸ್ !
ಜಿಂಬಾಬ್ವೆ ಪರ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿದ ಬ್ರಾಡ್ ಇವಾನ್ಸ್, ತನ್ನ 10 ಓವರ್ಗಳ ಸ್ಪೆಲ್ನಲ್ಲಿ 54 ರನ್ ನೀಡಿ 5 ಪ್ರಮುಖ ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ವಿಕ್ಟರ್ ನ್ಯಾಯುಚಿ ಮತ್ತು ಲೂಕ್ ಜೋಂಗ್ವೆ ತಲಾ 1 ವಿಕೆಟ್ ಪಡೆದರು.