ರಾಜೀವ್ ಗಾಂಧಿ ಹಂತಕರ ವಿರುದ್ಧದ ಕಾರ್ಯಾಚರಣೆಗೆ ಸಾಕ್ಷಿಯಾಗಿದ್ದ ಫೋಟೋ ಜರ್ನಲಿಸ್ಟ್ ಗೋಪಿನಾಥ್ ಗೆ ಕೆಯುಡಬ್ಲ್ಯೂಜೆ ಸನ್ಮಾನ

Prasthutha|

ಬೆಂಗಳೂರು: ವಿಶ್ವ ಫೋಟೋಗ್ರಾಫರ್ ದಿನಾಚರಣೆ ಅಂಗವಾಗಿ ಸುದ್ದಿ ಮನೆಯ ಹಿರಿಯ ಪೋಟೋ ಜರ್ನಲಿಸ್ಟ್ ಕೆ.ಗೋಪಿನಾಥ್ ಅವರನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸನ್ಮಾನಿಸಿದರು.

- Advertisement -

ದಿ ಸಿಟಿ ಟೈಮ್ಸ್, ಇಂಡಿಯನ್ ಎಕ್ಸ್ ಪ್ರೆಸ್, ದಿ ಹಿಂದೂ ಪತ್ರಿಕೆ ಸೇರಿದಂತೆ ಹಲವು ಪತ್ರಿಕೆಯಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕೆಲಸ ಮಾಡಿದ್ದ ಗೋಪಿನಾಥ್ ಕ್ರಿಯಾಶೀಲ ಪೋಟೋ ಜರ್ನಲಿಸ್ಟ್ ಆಗಿ ಸುದ್ದಿ ಮನೆಯಲ್ಲಿ ಗಮನ ಸೆಳೆದವರು. ಅವರ ಪ್ರತಿಭೆಯನ್ನು ಗುರುತಿಸಿ ಕೆಯುಡಬ್ಲ್ಯೂಜೆ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಹರಸಿ ಬಂದಿವೆ.

20.8.1991 ರಂದು ಬೆಂಗಳೂರು ಕೋಣನಕುಂಟೆಯ ಮನೆಯೊಂದರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರು ಅಡಗಿದ್ದ ಮನೆಯ ಮೇಲೆ ಪೊಲೀಸ್ ಮತ್ತು ಎಸ್ ಟಿಎಫ್ ಕಾರ್ಯಾಚರಣೆ ನಡೆದ ಸಂದರ್ಭದಲ್ಲಿ ಅದನ್ನು ಸಾಕ್ಷೀಕರಿಸಿ ಸ್ಥಳದಲ್ಲೇ ಇದ್ದು ಪ್ರಾಣದ ಹಂಗು ತೊರೆದು ಪೋಟೋ ತೆಗೆದ ಸಾಹಸಿ ಗೋಪಿನಾಥ್ ಎನ್ನುವುದು ಹೆಮ್ಮೆಯ ಸಂಗತಿ.

- Advertisement -

ಕಾಕತಾಳೀಯ ಅಂದರೆ ರಾಜೀವ್ ಗಾಂಧಿ ಹಂತಕರಾದ ಶಿವರಾಸನ್, ಶುಭ ಸೇರಿದಂತೆ ಆರು ಜನರ ಹತ್ಯೆ ನಡೆದ ಘಟನೆಗೆ ಇಂದಿಗೆ ಮುವತ್ತೊಂದು ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿರುವುದು ಮರೆಯಲಾಗದ ಸಂಗತಿ ಎಂದು ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಸ್ಮರಿಸಿದರು.

ಕೆಯುಡಬ್ಲ್ಯೂಜೆ ಜೊತೆಗೆ ಅವಿನಾಭಾವ ಒಡನಾಟ ಹೊಂದಿದ್ದೆ. ನನ್ನ ವೃತ್ತಿ ಸೇವೆ ಸ್ಮರಿಸಿ ಈ ದಿನ ಸನ್ಮಾನಿಸುತ್ತಿರುವುದು ಅಭಿಮಾನ ತಂದಿದೆ ಎಂದು ಗೋಪಿನಾಥ್ ಅಭಿಪ್ರಾಯಪಟ್ಟರು.
ವೃತ್ತಿ ಜೀವನದ ಒಂದೊಂದೇ ಘಟನೆಗಳನ್ನು ತೆರೆದಿಟ್ಟ ಅವರು ಒಂದು ಕ್ಯಾಮೆರಾ ನನ್ನನ್ನು, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿತು.

ಕ್ಷಣಗಳನ್ನು ಮರೆಯಲಾರೆ. ಯಾವುದೇ ವೃತ್ತಿಯನ್ನು ಬದ್ಧತೆಯಿಂದ ಮಾಡಿದರೆ, ಎಂಥವರೂ ಕೂಡ ಎತ್ತರದ ಸಾಧನೆ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪೋಟೋ ಜರ್ನಲಿಸ್ಟ್ ಗಳು ಗಮನಹರಿಸಲಿ ಎಂದು ಕರೆ ನೀಡಿದರು.

ಕೆಯುಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಚಿತ್ರದುರ್ಗ ಜಿಲ್ಲಾ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ಫೋಟೋಗ್ರಾಫರ್ ಶರಣು ಬಸಪ್ಪ ಮತ್ತಿತರರು ಹಾಜರಿದ್ದರು.



Join Whatsapp