ಬೆಂಗಳೂರು: ಕೆಎಸ್ ಸಿಎ ಆಯೋಜಿಸುತ್ತಿರುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಎರಡನೇ ಸುತ್ತಿನ ಮೊದಲ ಪಂದ್ಯದಲ್ಲಿ ಮೈಸೂರು ವಾರಿಯರ್ಸ್, ಮಂಗಳೂರು ಯುನೈಟೆಡ್ ತಂಡವನ್ನು 6 ವಿಕೆಟ್ ಅಂತರದಲ್ಲಿ ಮಣಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ 172 ರನ್ ಗಳ ಗೆಲುವಿನ ಗುರಿ ಪಡೆದಿತ್ತು. ನಾಯಕ ಕರುಣ್ ನಾಯರ್ 47 ಮತ್ತು ಪವನ್ ದೇಶಪಾಂಡೆ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ವಾರಿಯರ್ಸ್ ತಂಡ ಇನ್ನೂ 11 ಎಸೆತ ಬಾಕಿ ಇರುವಾಗಲೇ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಮಂಗಳೂರು ತಂಡ ನಿಕಿನ್ ಜೋಸ್ ಮತ್ತು ಅಭಿನವ್ ಮನೋಹರ್ ಆಕರ್ಷಕ ಅರ್ಧ ಶತಕದ ನೆರವಿನಿಂದ 7 ವಿಕೆಟ್ ನಷ್ಟದಲ್ಲಿ 171 ರನ್ ಗಳಿಸಿತ್ತು. ಆರಂಭಿಕನಾಗಿ ಮೈದಾನಕ್ಕಿಳಿದ ನಾಯಕ ರವಿಕುಮಾರ್ ಸಮರ್ಥ್, 22 ರನ್ ಗಳಿಸಿದ್ದ ವೇಳೆ ಪ್ರತೀಕ್ ಜೈನ್ ಎಸೆತದಲ್ಲಿ ಎಲ್ ಬಿಡಬ್ಲ್ಯೂ ಆದರು. ಮತ್ತೋರ್ವ ಆರಂಭಿಕ ಮ್ಯಾಕ್ನೆಲ್ ನೊರೊನ್ಹಾ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದರು. ಮೈಸೂರು ತಂಡದ ಪರ ಪ್ರತೀಕ್ ಜೈನ್ ಮತ್ತು ಆದಿತ್ಯಾ ಗೋಯಲ್ ತಲಾ ಎರಡು ವಿಕೆಟ್ ಪಡೆದರು.
ಬೆಳಗಾವಿ ಬ್ಲಾಸ್ಟರ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಮಂಗಳೂರು ಯುನೈಟೆಡ್ 66 ರನ್‌ಗಳ ಅಂತರದಲ್ಲಿ ಹೀನಾಯ ಸೋಲು ಅನುಭವಿಸಿತ್ತು.
ಟೂರ್ನಿಯಲ್ಲಿ ಇದುವರೆಗೂ ಒಟ್ಟು 7 ಪಂದ್ಯಗಳನ್ನು ಆಡಿರುವ ಮಂಗಳೂರು ಯುನೈಟೆಡ್, 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, 3 ಪಂದ್ಯಗಳನ್ನು ಸೋಲು ಕಂಡಿದೆ. 8 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. 5 ಗೆಲುವಿನೊಂದಿಗೆ 10 ಅಂಕಗಳಿಸಿರುವ ಬೆಂಗಳೂರು ಬ್ಲಾಸ್ಟರ್ಸ್ ಮೊದಲನೇ ಹಾಗೂ ರನ್ ರೇಟ್ ಆಧಾರದಲ್ಲಿ ಮೈಸೂರು ಎರಡನೇ ಸ್ಥಾನದಲ್ಲಿದೆ.