ಗುವಾಹಟಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಈಶಾನ್ಯ ವಲಯದಿಂದ ರದ್ದುಗೊಳಿಸಬೇಕೆಂದು ಆಗ್ರಹಿಸಿ ಈಶಾನ್ಯ ವಿದ್ಯಾರ್ಥಿ ಸಂಘಟನೆಯು (ಎನ್ಇಎಸ್ಒ) ಮತ್ತೆ ಬೀದಿಗಿಳಿದಿದ್ದು, ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದ ವಿವಿದೆಡೆ ಪ್ರತಿಭಟನೆಗಳು ನಡೆಸಿವೆ.
2019 ರಲ್ಲಿ ಅಸ್ಸಾಂ ನಲ್ಲಿ ಮೊದಲ ಬಾರಿಗೆ ಸಿಎಎ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಆ ಬಳಿಕ ಮಾರ್ಚ್ 2020 ರಲ್ಲಿ ಕೋವಿಡ್ -19 ಅಪ್ಪಳಿಸಿದಾಗ ಆಂದೋಲನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಆಂದೋಲನ ಮತ್ತೆ ಪ್ರಾರಂಭವಾಗಿದ್ದು ಅಸ್ಸಾಂ ರಾಜಧಾನಿ ಗುವಾಹಟಿ ಮತ್ತು ಈಶಾನ್ಯ ಭಾರತದ ಹಲವೆಡೆ ಅಖಿಲ ಅಸ್ಸಾಂ ವಿದ್ಯಾರ್ಥಿಗಳ ಒಕ್ಕೂಟ ಮತ್ತು ಈಶಾನ್ಯ ಭಾರತ ವಿದ್ಯಾರ್ಥಿಗಳ ಒಕ್ಕೂಟ ಜಂಟಿಯಾಗಿ ಪ್ರತಿಭಟನೆ ನಡೆಸಿವೆ.
ಈ ಸಂದರ್ಭದಲ್ಲಿ ಎನ್ ಇಎಸ್ ಒ ಅಧ್ಯಕ್ಷ ಸ್ಯಾಮ್ಯುಯೆಲ್ ಬಿ.ಜಾರ್ವಾ ಮಾತನಾಡಿ, ತ್ರಿಪುರಾದ ಮೂಲನಿವಾಸಿಗಳ ಹಣೆಬರಹವನ್ನು ನಾವು ನೋಡಿದ್ದೇವೆ. ಅಸ್ಸಾಂನ ವಿವಿಧ ಭಾಗಗಳಲ್ಲಿಯೂ ಇದೇ ರೀತಿ ನಡೆಯುತ್ತಿದೆ. ಮೇಘಾಲಯ ಅಥವಾ ಈಶಾನ್ಯದ ಮೂಲನಿವಾಸಿಗಳು ಇದೇ ಗತಿಯನ್ನು ಎದುರಿಸುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ ಎಂದು ಪ್ರಶ್ನಿಸಿದ್ದಾರೆ. ಸಿಎಎ ಕಾಯ್ದೆಯು ನಮ್ಮ ರಕ್ಷಣೆಗಾಗಿ ಎಂದು ಕೇಂದ್ರ ಹೇಳುತ್ತಿದೆ. ಆದರೆ ನಾವು ಭಾರತದ ಪ್ರಜೆಗಳೆಂದು ಒಪ್ಪಿಕೊಳ್ಳಲು ತಯ್ಯಾರಿಲ್ಲ ಎಂದು ಅವರು ಹೇಳಿದರು.