ಕ್ರೈಸ್ತರ ಮೇಲೆ ಕಿರುಕುಳ ನಡೆಯುತ್ತಿದೆ ಎಂಬುದು ಸುಳ್ಳು ಆರೋಪ: ಸುಪ್ರೀಂ ಕೋರ್ಟ್ ಮುಂದೆ ಕೇಂದ್ರದ ಹೇಳಿಕೆ

Prasthutha|

ನವದೆಹಲಿ: ಸತ್ಯಕ್ಕೆ ದೂರವಾದ ಪತ್ರಿಕಾ ವರದಿಗಳನ್ನು ಆಧರಿಸಿ ಭಾರತದಲ್ಲಿ ಕ್ರೈಸ್ತರ ಮೇಲೆ ದಾಳಿಗಳು ಹೆಚ್ಚಿವೆ ಎಂದು ಅರ್ಜಿದಾರರು ಮಾಡಿರುವ ಆರೋಪಗಳು, ಕಪೋಲಕಲ್ಪಿತ ಮತ್ತು ಸ್ವಹಿತಾಸಕ್ತಿಯ ದಾಖಲೆಗಳನ್ನು ಆಶ್ರಯಿಸಿವೆ ಎಂದು ಸುಪ್ರೀಂ ಕೋರ್ಟ್ಗೆ ಕೇಂದ್ರ ಸರ್ಕಾರ ಹೇಳಿದ್ದು ಅರ್ಜಿ ವಿಚಾರಣೆಗೆ ಅರ್ಹವಲ್ಲ ಎಂಬುದಾಗಿ ತಿಳಿಸಿದೆ.

- Advertisement -

ತನಗೆ ಲಭ್ಯವಿರುವ ಮಾಹಿತಿ ಪ್ರಕಾರ ಕ್ರೈಸ್ತರ ಮೇಲೆ ದಾಳಿಯಾಗಿದೆ ಎಂದು ಅರ್ಜಿದಾರರು ಹೇಳಿರುವ ಬಹುತೇಕ ಘಟನೆಗಳನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಿಳಿಸಲಾಗಿದೆ.

ದೇಶಾದ್ಯಂತ ಕ್ರೈಸ್ತ ಸಂಸ್ಥೆಗಳು ಮತ್ತು ಪಾದ್ರಿಗಳನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿಗಳನ್ನು ತಡೆಯಲು ಮಾರ್ಗಸೂಚಿ ಜಾರಿಗೊಳಿಸುವಂತೆ ಕೋರಿ ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆಯಾಗಿ ಅಫಿಡವಿಟ್ ಸಲ್ಲಿಸಲಾಗಿದೆ.

- Advertisement -

ಪತ್ರಿಕಾ ವರದಿಗಳು (ದಿ ವೈರ್, ದಿ ಸ್ಕ್ರಾಲ್, ಹಿಂದೂಸ್ತಾನ್ ಟೈಮ್ಸ್, ದೈನಿಕ್ ಭಾಸ್ಕರ್, ಇತ್ಯಾದಿ), “ಸ್ವತಂತ್ರ” ಆನ್ ಲೈನ್ ದತ್ತಾಂಶ ನೆಲೆಗಳು ಹಾಗೂ ವಿವಿಧ ಲಾಭೋದ್ದೇಶವಿಲ್ಲದ ಸಂಸ್ಥೆಗಳು ನಡೆಸಿದ ಸಂಶೋಧನೆಗಳ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿ ದೂರು ಸಲ್ಲಿಸಿರುವುದಾಗಿ ಅರ್ಜಿದಾರರು ಹೇಳಿಕೊಂಡಿದ್ದಾರೆ. ಈ ವರದಿಗಳಲ್ಲಿ ಕ್ರೈಸ್ತರ ಶೋಷಣೆಯಾಗುತ್ತಿದೆ ಎಂಬುದನ್ನು ಸುಳ್ಳು ಅಥವಾ ತಪ್ಪಾಗಿ ಬಿಂಬಿಸಲಾಗಿದೆ ಎಂಬುದು ತನಿಖೆಯಿಂದ ಬಹಿರಂಗವಾಗಿದೆ ಎಂದು ಕೇಂದ್ರ ಸರ್ಕಾರದ ಅರ್ಜಿ ವಿವರಿಸಿದೆ.

ಕೆಲವು ಸಂದರ್ಭಗಳಲ್ಲಿ, ಸಂಪೂರ್ಣ ಕ್ರಿಮಿನಲ್ ಸ್ವರೂಪದ ಮತ್ತು ವೈಯಕ್ತಿಕ ಸಮಸ್ಯೆಗಳಿಂದ ಉಂಟಾಗುವ ಘಟನೆಗಳನ್ನು ಕ್ರೈಸ್ತರನ್ನು ಗುರಿಯಾಗಿಸಿ ಮಾಡಿದ ಹಿಂಸಾಚಾರ ಎಂದು ವರ್ಗೀಕರಿಸಲಾಗಿದೆ. ಆದರೆ ಹಲವು ಘಟನೆಗಳು, ನೈಜವಿರಬಹುದು, ಇಲ್ಲವೇ ಉತ್ಪ್ರೇಕ್ಷಿತವೆಂದು ಕಂಡುಬರಬಹುದಾದರೂ, ಕ್ರೈಸ್ತರನ್ನು ಗುರಿಯಾಗಿಸಿಕೊಂಡ ಘಟನೆಗಳೊಂದಿಗೆ ನಂಟು ಹೊಂದಿಲ್ಲ ಎಂದು ಅದು ಹೇಳಿದೆ.

ಸುಪ್ರೀಂ ಕೋರ್ಟ್ 2018ರಲ್ಲಿ ತೆಹ್ಸೀನ್ ಪೂನಾವಾಲಾ ಪ್ರಕರಣದ ತೀರ್ಪಿನಲ್ಲಿ ನೀಡಿದ ಮಾರ್ಗಸೂಚಿಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ರೆವರೆಂಡ್ ಪೀಟರ್ ಮಚಾಡೋ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದೆ.

ಅಂತಹ ಅಪರಾಧಗಳನ್ನು ಗಮನಿಸಲು ನೋಡಲ್ ಅಧಿಕಾರಿಗಳ ನೇಮಕ, ತ್ವರಿತ ವಿಚಾರಣೆಗಳು, ಸಂತ್ರಸ್ತರಿಗೆ ಪರಿಹಾರ, ಅಪರಾಧ ತಡೆಗೆ ಶಿಕ್ಷೆ ಮತ್ತು ಸಡಿಲವಾದ ಕಾನೂನು ಜಾರಿ ವಿರುದ್ಧ ಶಿಸ್ತು ಕ್ರಮ ಸೇರಿದಂತೆ ಪೂನಾವಾಲಾ ಪ್ರಕರಣದ ತೀರ್ಪಿನಲ್ಲಿ ಕೇಂದ್ರ ಮತ್ತು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು.

ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಪೀಠದೆದುರು ನಡೆದ ವಿಚಾರಣೆ ವೇಳೆ, ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಗೃಹ ಸಚಿವಾಲಯ ಪ್ರತಿಕ್ರಿಯೆ ಸಲ್ಲಿಸಿರುವುದಾಗಿ ತಿಳಿಸಿದರು. ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ಪ್ರತ್ಯುತ್ತರ ಅರ್ಜಿ ಸಲ್ಲಿಸಲು ಸಮಯಾವಕಾಶ ಕೋರಿದರು. ಪ್ರಕರಣದ ಮುಂದಿನ ವಿಚಾರಣೆ ಗುರುವಾರ, ಆಗಸ್ಟ್ 25ರಂದು ನಡೆಯಲಿದೆ.

(ಕೃಪೆ: ಬಾರ್ & ಬೆಂಚ್)



Join Whatsapp