ಬೆಂಗಳೂರು: ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡರು ನಗರದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದು, ಅವರ ನೆನಪಿಗಾಗಿ ಬೆಂಗಳೂರು ನಗರಕ್ಕೆ ಅವರ ಹೆಸರನ್ನು ಇಡಬೇಕೆಂದು ನಿವೃತ್ತ ಹಿರಿಯ ಐಎಎಸ್ ಅಧಿಕಾರಿ, ಸಾಹಿತಿ ಖಲೀಲ್ ಮಾಮಾನ್ ಹೇಳಿದರು.
ಬೆಂಗಳೂರಿನ ಅಲ್ ಅಮೀನ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜಿನಲ್ಲಿ ನಡೆದ ಜಯರಾಮ್ ರಾಯಪುರ ಅವರ ಬೆಂಗಳೂರು ನಿರ್ಮಾತೃ ಕೆಂಪೇಗೌಡ ಪುಸ್ತಕವನ್ನು ಹಿಂದಿಗೆ ಅನುವಾದಿತವಾಗಿರುವ ಶಾಕೀರ ಖಾನಂ ಅವರ “ಚುನೋತಿ ಸ್ವಾಭಿಮಾನ” ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕೇಪೇಗೌಡರು ಬೆಂಗಳೂರನ್ನು ಉತ್ತಮವಾಗಿ ನಿರ್ಮಿಸಿದ್ದಾರೆ. ಕೆರೆಗಳು, ಒಂದೇ ಮಾರ್ಗದ ರಸ್ತೆಗಳು, ಗಡಿ ಪ್ರದೇಶ ಗುರುತಿಸುವಿಕೆ ಜತೆಗೆ ಚಿಕ್ಕಪೇಟೆ, ನಗರ್ತರ ಪೇಟೆ, ಕಬ್ಬನ್ ಪೇಟೆ, ಹೀಗೆ ಚಿಕ್ಕ ಪೇಟೆಗಳನ್ನು ನಿರ್ಮಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ದೆಹಲಿಗಿಂತ ಬೆಂಗಳೂರು ನಗರ ಉತ್ತಮವಾಗಿದೆ. ಅದಕ್ಕೆ ಮೂಲ ಕಾರಣ ನಿರ್ಮಾತೃ ಕೆಂಪೇಗೌಡರು ಎಂದು ಬಣ್ಣಿಸಿದರು.
ದೆಹಲಿ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೊಗಲರ ಷಹಜಹಾನ್ ಗಿಂತ ಕೆಂಪೇಗೌಡರು ನಮಗೆ ಮಾದರಿಯಾಗಿ ಕಾಣುತ್ತಾರೆ. ಮಾದರಿ ನಗರವಾಗಿ ನಿರ್ಮಿಸಿದ್ದ ಬೆಂಗಳೂರಿಗೆ ಕೆಂಪೇಗೌಡರ ನಗರ ಎಂದು ಹೆಸರಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಬೆಂದ ಕಾಳು ಮಾರುವ ಊರಿಗೆ ಬೆಂದಕಾಳೂರು ಎಂಬ ಹೆಸರು ಕಾಲ ಕ್ರಮೇಣ ಬೆಂಗಳೂರು ಎಂದು ಹೆಸರು ಪಡೆದಿರುವುದು ಇದೆಲ್ಲ ಸೂಕ್ತವಲ್ಲ. ಕೆಂಪೇಗೌಡ ನಗರ ಎಂದು ಹೆಸರಿಸುವುದು ಸೂಕ್ತವಾಗಿ ಎಂದರು.
ಬೆಂಗಳೂರಿನ ವಿಧಾನ ಸೌಧದ ಮುಂಭಾಗದಲ್ಲಿ ಅನೇಕ ಮಹನೀಯರ ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ ಅದರಂತೆ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದರು.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಶಾಸಕ ಉದಯ್ ಗರುಡಾಚಾರ್, ರಾಷ್ಟ್ರೀಯ ಕಾಂಗ್ರೆಸ್ ನಾಯಕ ಕೆ.ರೆಹಮಾನ್ ಖಾನ್, ಅಲ್- ಅಮೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉಮರ್ ಇಸ್ಮಾಯಿಲ್ ಖಾನ್ ಮತ್ತಿತರರು ಹಾಜರಿದ್ದರು.