ಪಾಟ್ನಾ: ಬಿಜೆಪಿಯೊಂದಿಗಿನ ಮೈತ್ರಿಗೆ ಗುಡ್ ಬೈ ಹೇಳಿ ಆರ್.ಜೆ.ಡಿ ಮತ್ತು ಇತರ ಪಕ್ಷಗಳ ಜೊತೆಗೂಡಿ ಸರ್ಕಾರ ರಚಿಸಿ ಮುಖ್ಯಮಂತ್ರಿಯಾಗಿ ಮುಂದುವರಿದಿರುವ ನಿತೀಶ್ ಕುಮಾರ್ ಬಹುಮತ ಸಾಬೀತಿಗೆ 2 ವಾರ ಸಮಯ ಕೇಳಿದ್ದಾರೆ. ಆಗಸ್ಟ್ 24ರ ನಂತರ ಬಹುಮತ ಸಾಬೀತುಪಡಿಸುವುದಾಗಿ ಹೇಳಿದ್ದಾರೆ.
160ಕ್ಕೂ ಹೆಚ್ಚು ಶಾಸಕರ ಬೆಂಬಲವಿದ್ದರೂ ಸಹ ಬಹುಮತ ಸಾಬೀತಪಡಿಸಲು ಆಗಸ್ಟ್ 24ರಿಂದ ವಿಧಾನಸಭಾ ಅಧಿವೇಶನ ಕರೆಯುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ನಿತೀಶ್ ಕುಮಾರ್ ಹೀಗೇಕೆ ಸಮಯ ಕೇಳಿದ್ದಾರೆಂದು ಬಿಹಾರ ರಾಜಕೀಯದಲ್ಲಿ ಚರ್ಚೆಯಾಗುತ್ತಿದೆ. ವಿಧಾನಸಭೆಯ ಸ್ಪೀಕರ್ ಈಗಲೂ ಬಿಜೆಪಿಯವರೆ ಆಗಿರುವುದರಿಂದ ಬಹುಮತ ಇದ್ದರೂ ಸಹ ಯಾವುದೇ ತೊಂದರೆಯಾಗಬಾರದು ಎಂಬ ಕಾರಣಕ್ಕೆ ವಿಶ್ವಾಸಮತ ಯಾಚಿಸಲು ಮುಂದಾಗುತ್ತಿಲ್ಲ ಎನ್ನಲಾಗುತ್ತಿದೆ. ಸ್ಪೀಕರ್ ಬದಲಾವಣೆಯ ಬಳಿಕವಷ್ಟೇ ವಿಶ್ವಾಸಮತ ಯಾಚಿಸುವ ನಿರ್ಧಾರ ಮಾಡಿ ಹೀಗೆ ಸಮಯಾವಕಾಶ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ವಿರುದ್ಧ ಮಹಾಘಟಬಂಧನ್ 55 ಶಾಸಕರು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದಾರೆ. ಹೀಗೆ ಗೊತ್ತುವಳಿ ಮಂಡಿಸಿದ ಎರಡು ವಾರಗಳ ನಂತರವಷ್ಟೇ ಸ್ಪೀಕರ್ ಅನ್ನು ಬದಲಾಯಿಸಬಹುದಾಗಿದೆ. ಹಾಗಾಗಿ ಆಗಸ್ಟ್ 24ರವರೆಗೆ ಕಾಯಲು ಸರ್ಕಾರ ಸಿದ್ದವಾಗಿದೆ ಎನ್ನಲಾಗಿದೆ.
243 ಸದಸ್ಯಬಲದ ಬಿಹಾರ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 122 ಶಾಸಕರ ಅಗತ್ಯವಿದ್ದು, ಸದ್ಯಕ್ಕೆ ಮಹಾಘಟಬಂಧನ್ ಸರ್ಕಾರಕ್ಕೆ ಬರೋಬ್ಬರಿ 164 ಶಾಸಕರ ಬೆಂಬಲವಿದೆ. ಆದರೂ ವಿಧಾನಸಭಾ ಅಧಿವೇಶನದ ಮೊದಲ ದಿನ ಸ್ಪೀಕರ್ ಅನ್ನು ಕೆಳಗಿಳಿಸಿ, ಆರ್‌ಜೆಡಿ ಪಕ್ಷದ ಒಬ್ಬರನ್ನು ನೂತನ ಸ್ಪೀಕರ್ ಆಗಿ ಆಯ್ಕೆ ಮಾಡಿ ಬಳಿಕ ನಿತೀಶ್ ಕುಮಾರ್ ವಿಶ್ವಾಸಮತ ಯಾಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹಾಲಿ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ನಿತೀಶ್ ಕುಮಾರ್ ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಳ್ಳಲು ಕಾರಣವಾದವರಲ್ಲಿ ಒಬ್ಬರಾಗಿದ್ದಾರೆ. ನಿತೀಶ್ ಕುಮಾರ್ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಅವರು ಮಾಡಿದ್ದರು. ಅಗ್ನಿಪಥ್ ಯೋಜನೆ ಕುರಿತು ಚರ್ಚೆಗೆ ಅವಕಾಶ ಇದೇ ಸ್ಪೀಕರ್ ನೀಡದೇ ಇದ್ದಾಗ ಆರ್‌ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳು ಕೂಡ ಅಧಿವೇಶನ ಬಹಿಷ್ಕರಿಸಿದ್ದವು.
ಸ್ಪೀಕರ್ ಸಿನ್ಹಾ ಯಾವಾಗ ಬೇಕಾದರೂ ರಾಜೀನಾಮೆ ನೀಡಬಹುದಾಗಿದೆ. ಅವರು ರಾಜೀನಾಮೆ ನೀಡಿದರೆ ಹೊಸ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.