ಬೆಂಗಳೂರು: ರಸ್ತೆ ಬದಿ ಮೇಯುತ್ತಿದ್ದ ಹಸುಗಳ ಕೆಚ್ಚಲು, ಬಾಲ ಕತ್ತರಿಸಿ ವಿಕೃತಿ ಮೆರೆಯುತ್ತಿದ್ದ ಕಿಡಿಗೇಡಿಯೊಬ್ಬನನ್ನು ಸ್ಥಳೀಯರು ಹಿಡಿದು ಧರ್ಮದೇಟು ಕೊಟ್ಟು ಚಂದ್ರಾಲೇಔಟ್ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸ್ಥಳೀಯರು ವಶಕ್ಕೆ ನೀಡಿದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜೆಲಗೆರೆಯ ಮಂಜುನಾಥ್ (34)ನನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಇತ್ತೀಚಿಗೆ ನಾಯಂಡಹಳ್ಳಿ ಸಮೀಪ ರಸ್ತೆ ಬದಿ ಮೇಯುತ್ತಿದ್ದ ಹಸುಗಳ ಜತೆ ಆರೋಪಿ ಅಸಭ್ಯವಾಗಿ ವರ್ತಿಸುತ್ತಿದ್ದ. ಈ ಕೃತ್ಯದಿಂದ ರೊಚ್ಚಿಗೆದ್ದ ಹಸುಗಳ ಮಾಲೀಕರು, ಆರೋಪಿಯನ್ನು ಹಿಡಿದು ಥಳಿಸಿ ಚಂದ್ರಾಲೇಔಟ್ ಠಾಣೆ ಪೊಲೀಸರಿಗೊಪ್ಪಿಸಿದ್ದಾರೆ.
ಬಳಿಕ ಹಸು ಮಾಲೀಕ ಶಶಿಕುಮಾರ್ ನೀಡಿದ ದೂರಿನ ಮೇರೆಗೆ ಎಫ್ ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಂಜುನಾಥ ಕೆಲಸವಿಲ್ಲದೆ ಅಲೆಯುತ್ತಿದ್ದು ಆಗಾಗ್ಗೆ ತನ್ನೂರಿನಿಂದ ರೈಲಿನಲ್ಲಿ ನಾಯಂಡಹಳ್ಳಿಯಲ್ಲಿದ್ದ ಸಂಬಂಧಿಕರ ಮನೆಗೆ ಬಂದು ಹೋಗುತ್ತಿದ್ದ. ನಾಯಂಡಹಳ್ಳಿಯಲ್ಲಿ ಕೆಲವರು ಹಸುಗಳ ಸಾಕಾಣಿಕೆ ಮಾಡಿದ್ದು, ಅಲ್ಲಿನ ಖಾಲಿ ಪ್ರದೇಶಗಳಲ್ಲಿ ಅವುಗಳನ್ನು ಮೇಯಲು ಬಿಡುತ್ತಾರೆ. ಹೀಗೆ ನಾಯಂಡಹಳ್ಳಿಗೆ ಸಂಬಂಧಿಕರ ಮನೆಗೆ ಬಂದಾಗ ಮಂಜ, ಹಸುಗಳು ಮೇಯುವಾಗ ಅವುಗಳ ಕೆಚ್ಚಲು ಹಾಗೂ ಬಾಲ ಕತ್ತರಿಸಿ ಹಿಂಸಿಸಿ ವಿಕೃತ ಆನಂದಪಡುತ್ತಿದ್ದ ಎಂದು ತಿಳಿದುಬಂದಿದೆ.
ತಮ್ಮ ಹಸುಗಳ ಮೇಲೆ ಪೈಶಾಚಿಕ ಕೃತ್ಯದಿಂದ ಕೆರಳಿದ ಹೈನುಗಾರರು, ಕೆಲ ದಿನಗಳು ರಹಸ್ಯವಾಗಿ ಹಸುಗಳ ರಕ್ಷಣೆಗೆ ನಿಂತಿದ್ದರು. ಇತ್ತೀಚಿಗೆ ಹಸುಗಳ ಮೇಯುವಾಗ ಅವುಗಳ ಬಳಿಗೆ ಬಂದು ಮಂಜ ಮತ್ತೆ ಅಸಭ್ಯವಾಗಿ ವರ್ತಿಸುತ್ತಿದ್ದ. ಇದನ್ನು ನೋಡಿದ ಕೂಡಲೇ ಎಚ್ಚೆತ್ತ ಹಸುಗಳ ಮಾಲೀಕರು, ಆತನ ಕೃತ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಬಳಿಕ ಆತನನ್ನು ಹಿಡಿದು ಬಡಿದು ಚಂದ್ರಾಲೇಔಟ್ ಠಾಣೆಗೆ ಒಪ್ಪಿಸಿದ್ದಾರೆ.