ಹೈದರಾಬಾದ್: ಹೈದರಾಬಾದ್’ನ ಶಂಶಾಬಾದ್’ನಲ್ಲಿ ನಾಲ್ಕು ದಿನಗಳ ಹಿಂದೆ ಧ್ವಂಸಗೊಳಿಸಲಾದ ಮಸೀದಿಯನ್ನು ಅದೇ ಸ್ಥಳದಲ್ಲಿ ಪುರಸಭೆಯ ಅಧಿಕಾರಿಗಳು ಮರು ನಿರ್ಮಿಸಲಿದ್ದಾರೆ ಎಂದು AIMIM ತಿಳಿಸಿದೆ.
ತೆಲಂಗಾಣ ಶಾಸಕ ಕೌಸರ್ ಮುಹಿಯುದ್ದೀನ್, ಹಲವು AIMIM ಮುಖಂಡರು ಮತ್ತು ಸ್ಥಳೀಯ ನಿವಾಸಿಗಳು ಕಳೆದ ಮಂಗಳವಾರ ಧ್ವಂಸಗೊಂಡ ಮಸೀದಿ ಎ ಖಾಝಾ ಮಹ್ಮೂದ್ ವಠಾರದಲ್ಲಿ ಸಭೆ ಸೇರಿ ಶುಕ್ರವಾರದ ನಮಾಝ್ ನಿರ್ವಹಿಸಿದ್ದರು.
ಪ್ರಾರ್ಥನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೊಯಿಯುದ್ದೀನ್, ಅದೇ ಸ್ಥಳದಲ್ಲಿ ಮಸೀದಿಯನ್ನು ಮರು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
AIMIM ಮುಖಸ್ಥ, ಸಂಸದ ಅಸದುದ್ದೀನ್ ಉವೈಸಿ ಅವರ ಸೂಚನೆಯ ಮೇರೆಗೆ ರಾಜ್ಯ ಸರ್ಕಾರ ಮಸೀದಿಯ ಪುನರ್ ನಿರ್ಮಾಣಕ್ಕೆ ಅನುಮತಿ ನೀಡಿದೆ ಎಂದು ಅವರು ತಿಳಿಸಿದರು.
ಶುಕ್ರವಾರ ನಮಾಝ್’ಗೆ ಕೇವಲ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಮಸೀದಿ ಧ್ವಂಸವನ್ನು ವಿರೋಧಿಸಿ ಸ್ಥಳೀಯ ಮುಸ್ಲಿಮರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. AIMIM ನಗರಸಭೆ ಕಚೇರಿ ಮತ್ತು ರಂಗಾರೆಡ್ಡಿ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತ್ತು
ಪ್ರಾರ್ಥನೆಗೆ ಮಂಜೂರಾತಿ ಪಡೆಯದೆ ಅಕ್ರಮ ಸ್ಥಳದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂದು ಆರೋಪಿಸಿದ ಸ್ಥಳೀಯ ನಿವಾಸಿಗಳು ನೀಡಿದ ದೂರಿನ ಮೇರೆಗೆ ಪಾಲಿಕೆಯ ಅಧಿಕಾರಿಗಳು, ಪೊಲೀಸರ ಸಮ್ಮುಖದಲ್ಲಿ ಬುಲ್ಡೋಜರ್‌ಗಳನ್ನು ಬಳಸಿ ಮಸೀದಿಯನ್ನು ಕೆಡವಿಹಾಕಿದ್ದರು. ಆದರೆ ಈ ಆರೋಪವನ್ನು ಸ್ಥಳೀಯ ಮುಸ್ಲಿಮರು ತಳ್ಳಿಹಾಕಿದ್ದಾರೆ.