ಬೊಮ್ಮಾಯಿ ದೆಹಲಿ ಭೇಟಿ ರದ್ದು: ಮತ್ತೆ ನನೆಗುದಿಗೆ ಬಿದ್ದ ಸಚಿವ ಸಂಪುಟ ವಿಸ್ತರಣೆ

Prasthutha|

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಮತ್ತಿತರ ರಾಜಕೀಯ ತೀರ್ಮಾನಗಳನ್ನು ಕೈಗೊಳ್ಳುವ ಸಲುವಾಗಿ ದೆಹಲಿಗೆ ತೆರಳಲು ಸಜ್ಜಾಗುತ್ತಿರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಅವರ ಪ್ರವಾಸ ರದ್ದಾಗಿದೆ.

- Advertisement -

ಮುಖ್ಯಮಂತ್ರಿ ಅವರು ಇಂದು ಬೆಳಿಗ್ಗೆ 11.30ಕ್ಕೆ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸಬೇಕಿತ್ತು. ಆದರೆ, ಕೊರೊನಾ ಕಾರಣದಿಂದ ಅವರ ಎರಡು ದಿನಗಳ ದೆಹಲಿ ಭೇಟಿ ರದ್ದು ಮಾಡಿ ಮನೆಯಲ್ಲೇ ಐಸೋಲೇಷನ್ಗೆ ಒಳಗಾಗಿದ್ದಾರೆ. ಮನೆಯಿಂದಲೇ ದೈನಂದಿನ ಆಡಳಿತ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಕೊರೊನಾ ಸೋಂಕಿನ ಬಗ್ಗೆ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ನನಗೆ ಇಂದು ಕೋವಿಡ್-19 ಸೋಂಕು ದೃಢಪಟ್ಟಿದ್ದು, ಆರೋಗ್ಯವಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ನನ್ನ ದೆಹಲಿ ಪ್ರವಾಸ ರದ್ದಾಗಿದೆ ಎಂದು ಹೇಳಿದ್ದಾರೆ.

- Advertisement -

ಕೋವಿಡ್ ಲಕ್ಷಣಗಳು ತಮಗೆ ಕಂಡು ಬಂದ ಹಿನ್ನೆಲೆಯಲ್ಲಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ಸೋಂಕು ದೃಢಪಟ್ಟಿದೆ. ಈ ವರ್ಷದಲ್ಲಿ ಬೊಮ್ಮಾಯಿ ಅವರು 2ನೇ ಬಾರಿಗೆ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಕಳೆದ ಜನವರಿಯಿಂದ ಕೊರೊನಾ ಸೋಂಕು ದೃಢಪಟ್ಟಿದ್ದು, ದೆಹಲಿಗೆ ತೆರಳಬೇಕಿದ್ದ ಮುಖ್ಯಮಂತ್ರಿಗಳು, ಸಂಜೆ ದೆಹಲಿಯಲ್ಲಿ ನಡೆಯಲಿರುವ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೆಹಲಿಯಲ್ಲೇ ವಾಸ್ತವ್ಯ ಹೂಡಿ ನಾಳೆ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಂಡು ನಾಳೆ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಬೇಕಿತ್ತು. ಹಾಗೆಯೇ, ದೆಹಲಿ ಭೇಟಿ ಸಂದರ್ಭದಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡುವ ಕಾರ್ಯಕ್ರಮ ಇತ್ತು. ಈಗ ಇವೆಲ್ಲ ರದ್ದಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಲಾಲ್ ಬಾಗ್ ನಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದ್ದರು.

ಈ ಕಾರ್ಯಕ್ರಮದಲ್ಲಿ ನಟರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಹಲವು ಸಚಿವರು, ಗಣ್ಯರು ಪಾಲ್ಗೊಂಡಿದ್ದರು. ನಂತರ ಚಿತ್ರಕಲಾ ಪರಿಷತ್ ನಲ್ಲಿ ಜವಳಿ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿಗಳು, ನಂತರ ಕೃಷ್ಣಾದಲ್ಲಿ ರಾಷ್ಟ್ರೀಯ ಬಿಜೆಪಿಯ ಹರ್ ಘರ್ ತಿರಂಗ ವೀಡಿಯೋ ಸಂವಾದದಲ್ಲೂ ಪಾಲ್ಗೊಂಡು ವಿವಿಧ ಉದ್ದಿಮೆಗಳ ಆರಂಭಕ್ಕೆ ಅನುಮತಿ ನೀಡುವ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ ಸಭೆಯಲ್ಲೂ ಭಾಗವಹಿಸಿದ ನಂತರ ರಾಜ್ಯಮಟ್ಟದ ಪ್ರಥಮ ದಿಶಾ ಸಮಿತಿ ಸಭೆಯಲ್ಲೂ ಪಾಲ್ಗೊಂಡಿದ್ದರು.

ನಂತರ ಸಂಜೆ ಜ್ಞಾನಭಾರತಿ ಆವರಣದಲ್ಲಿ ನಡೆದ ಸೆಂಟರ್ ಆಪ್ ಎಕ್ಸಲೆನ್ಸ್ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದರು.

ಈ ಮಧ್ಯೆ ಮುಖ್ಯಮಂತ್ರಿ ಅವರು, ಕೋವಿಡ್ ಸೋಂಕಿಗೆ ಒಳಗಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ಸಚಿವರು, ಶಾಸಕರು ದೂರವಾಣಿಯಲ್ಲಿ ಮಾತನಾಡಿ ಆರೋಗ್ಯ ವಿಚಾರಿಸಿ, ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ.

ಬೊಮ್ಮಾಯಿ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಇಂದು ಬೆಳಿಗ್ಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೂರವಾಣಿ ಕರೆ ಮಾಡಿ ಬೊಮ್ಮಾಯಿ ಅವರ ಆರೋಗ್ಯ ವಿಚಾರಿಸಿದರು. ಹಾಗೆಯೇ ಸಚಿವರುಗಳಾದ ವಿ. ಸೋಮಣ್ಣ, ಆರ್. ಅಶೋಕ್, ಡಾ. ಕೆ. ಸುಧಾಕರ್, ಡಾ. ಅಶ್ವತ್ಥ ನಾರಾಯಣ, ಕೆ. ಗೋಪಾಲಯ್ಯ, ಹಾಲಪ್ಪ ಆಚಾರ್, ಪ್ರಭು ಚೌಹಾಣ್, ಬಿ.ಸಿ ನಾಗೇಶ್ ಸೇರಿದಂತೆ ಹಲವು ಸಚಿವರುಗಳು ಮುಖ್ಯಮಂತ್ರಿಗಳಿಗೆ ದೂರವಾಣಿ ಮಾಡಿ ಆರೋಗ್ಯ ವಿಚಾರಿಸಿ ಬೇಗ ಗುಣಮುಖರಾಗುವಂತೆ ಹಾರೈಸಿದರು. ಕೋವಿಡ್ ಸೋಂಕಿಗೆ ಒಳಗಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಆರ್ಟಿ ನಗರದ ತಮ್ಮ ನಿವಾಸದಲ್ಲೇ ಐಸೋಲೇಷನ್ಗೆ ಒಳಗಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ.

Join Whatsapp